ADVERTISEMENT

ಏತ ನೀರಾವರಿ ನಿರ್ವಹಣೆಗೆ ಹೊರಗುತ್ತಿಗೆ

ಕರಡು ನೀತಿ– ಮಾರ್ಗಸೂಚಿಗೆ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 15:53 IST
Last Updated 20 ಅಕ್ಟೋಬರ್ 2022, 15:53 IST

ಬೆಂಗಳೂರು: ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಒಳಪಡುವ ಪ್ರಮುಖ ಏತ ನೀರಾವರಿಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡುವ ಸಂಬಂಧ ರೂಪಿಸಿರುವ ಕರಡು ನೀತಿ ಮತ್ತು ಮಾರ್ಗಸೂಚಿಗಳಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಏತ ನೀರಾವರಿ ಯೋಜನೆಗಳ ಕಾರ್ಯಚರಣೆ ಮತ್ತು ನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಅವುಗಳೆಂದರೆ, ಸ್ಥಳೀಯ ಕಾರ್ಯಾಚರಣೆ ಮತ್ತು ನಿರ್ವಹಣಾ ಏಜೆನ್ಸಿಗಳಲ್ಲಿ ವೃತ್ತಿಪರತೆಯ ಕೊರತೆ, ಅನನುಭವಿ ಕಾರ್ಯಾಚರಣೆ ಸಿಬ್ಬಂದಿ, ಪ್ರಮುಖ ಸ್ಥಾವರ ಹಾಗೂ ಯಂತ್ರೋಪಕರಣಗಳ ನೈಜ ಸಮಯದ ಕಾರ್ಯಕ್ಷಮತೆಯ ಮಾಹಿತಿ ಕೊರತೆ ಇದೆ ಎಂದರು.

ADVERTISEMENT

ಇದರಿಂದಾಗಿ, ಸಾಕಷ್ಟು ಏತ ನೀರಾವರಿಯಲ್ಲಿ ತಾಂತ್ರಿಕ ನಿರ್ವಹಣೆ ಸಾಧ್ಯವಾಗದೇ ಮೋಟಾರ್‌ಗಳು, ಪಂಪ್‌ಸೆಟ್‌ಗಳು ಹಾಳಾಗಿವೆ. ಇವುಗಳ ರಿಪೇರಿಯೂ ಆಗುತ್ತಿಲ್ಲ. ಇದರಿಂದಾಗಿ ನಾಲೆಯ ಕಟ್ಟ ಕಡೆಯ ರೈತರಿಗೆ ನೀರು ತಲುಪುತ್ತಿಲ್ಲ. ವಿದ್ಯುತ್‌ ಸಂಪರ್ಕವೂ ಹಾಳಾಗಿರುವ ಸಾಧ್ಯತೆ ಇದೆ. ಆದ್ದರಿಂದ ಇವುಗಳ ಸಂಪೂರ್ಣ ನಿರ್ವಹಣೆ ಜವಾಬ್ದಾರಿಯನ್ನು ಹೊರಗುತ್ತಿಗೆ ನೀಡುವ ಅಂಶವನ್ನು ಒಳಗೊಂಡಿದೆ. ಇನ್ನು ಮುಂದೆ ಇವುಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗುವುದುಎಂದು ಮಾಧುಸ್ವಾಮಿ ಹೇಳಿದರು..

ಪ್ರಮುಖ ತೀರ್ಮಾನಗಳು
* ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿ 290 ಸಂಚಾರಿ ಪಶು ಚಿಕಿತ್ಸಾ ಘಟಕದ ವಾಹನಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಸೇವಾ ಪೂರೈಕೆದಾರರ ಮೂಲಕ ಸೇವೆಯನ್ನು ಪಡೆಯಲು ಮತ್ತು ನಿರ್ವಹಿಸಲು ಆಡಳಿತಾತ್ಮಕ ಅನುಮೋದನೆ.

* ರಾಯಚೂರು ವಿಶ್ವವಿದ್ಯಾಲಯಕ್ಕೆ ₹15 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡಲು ಆಡಳಿತಾತ್ಮಕ ಅನುಮೋದನೆ.

* ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕು ಪಡುವರಿ ಗ್ರಾಮದ ಸುಬ್ಬರಾಡಿ ಎಂಬಲ್ಲಿ ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ₹47.47 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.

* ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ಕೇಂದ್ರದಲ್ಲಿ ನೂತನ ಬಸ್‌ ನಿಲ್ದಾಣ ನಿರ್ಮಾಣವನ್ನು ₹12 ಕೋಟಿ ಅಂದಾಜು ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ನಿರ್ಮಿಸಲು ಒಪ್ಪಿಗೆ.

* ಕಾಗವಾಡ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ನೀರನ್ನೆತ್ತಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ 23 ಕೆರೆಗಳನ್ನು ತುಂಬಿಸುವ ₹229.40 ಕೋಟಿ ಅಂದಾಜು ಮೊತ್ತದ ಯೋಜನೆಗೆ ಅನುಮೋದನೆ.

* ವಿದ್ಯಾರ್ಹತೆ, ಪದನಾಮ ಬದಲಾವಣೆ

ಕೃಷಿ ಇಲಾಖೆಯಲ್ಲಿ ನೇರ ನೇಮಕಾತಿ ಮತ್ತು ಬಡ್ತಿಗಾಗಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ನಿರ್ದೇಶಕರ ವೃಂದದ ಹುದ್ದೆಗಳಿಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಗೆ ಪದನಾಮದ ಬದಲಾವಣೆಯ ಜೊತೆಗೆ, ಹಿಂದಿನ ಪದವಿಗಳೊಂದಿಗೆ ಹೊಸ ಪದವಿ ಪದನಾಮಗಳಾದ ಬಿಎಸ್ಸಿ( ಅಗ್ರಿಕಲ್ಚರ್ ಮಾರ್ಕೆಟಿಂಗ್‌ ಮತ್ತು ಕೋ ಆಪರೇಷನ್)/ ಬಿಎಸ್ಸಿ(ಆನರ್ಸ್) ಬಿಜಿನೆಸ್‌ ಮ್ಯಾನೇಜ್‌ಮೆಂಟ್‌/ಬಿಎಸ್ಸಿ(ಆನರ್ಸ್‌) ಆಗ್ರಿ ಮಾರ್ಕೆಟಿಂಗ್‌ ಮತ್ತು ಕೋಆಪರೇಷನ್ ಸೇರಿಸಲು ಒಪ್ಪಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.