ADVERTISEMENT

ಬಳ್ಳಾರಿ: ಆತಂಕದಲ್ಲಿ ಕೊರೊನಾ ಆಸ್ಪತ್ರೆ ಸಿಬ್ಬಂದಿ, ಅಭಯ ನೀಡಿದ ಜಿಲ್ಲಾ ಸರ್ಜನ್

ಜಿಲ್ಲಾಸ್ಪತ್ರೆಯನ್ನೇ ಕೋವಿಡ್–19 ಆಸ್ಪತ್ರೆಯಾಗಿ ಬದಲಿಸಿದ ಮೊದಲ ದಿನವೇ ಆತಂಕ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 15:05 IST
Last Updated 1 ಏಪ್ರಿಲ್ 2020, 15:05 IST
ಡಾ.ಬಸರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ
ಡಾ.ಬಸರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ   

ಬಳ್ಳಾರಿ: ಕೋವಿಡ್‌ 19 ಆಸ್ಪತ್ರೆಯಾಗಿ ಪರಿವರ್ತನೆಯಾಗಿ ಕಾರ್ಯಾರಂಭ ಮಾಡಿದ ಮೊದಲ ದಿನವಾದ ಬುಧವಾರ ಇಲ್ಲಿನ ಜಿಲ್ಲಾಸ್ಪತ್ರೆ ಸಿಬ್ಬಂದಿ ತೀವ್ರ ಆತಂಕ ವ್ಯಕ್ತಪಡಿಸಿದರು.

‘ಶಂಕಿತ ಸೋಂಕಿತರು ಮತ್ತು ಸೋಂಕಿತರನ್ನು ಇಡಲಾಗಿರುವ ಐಸೋಲೇಷನ್ ವಾರ್ಡ್‌ಗೆ ವೈದ್ಯರು ನಿಯಮಿತವಾಗಿ ಬರುತ್ತಿಲ್ಲ. ಶುಷ್ರೂಷಕಿಯರು ಮತ್ತು ಡಿ.ದರ್ಜೆ ನೌಕರರನ್ನಷ್ಟೇ ನಿಯೋಜಿಸಲಾಗಿದೆ. ವಾರ್ಡ್‌ನಲ್ಲಿರುವವರಿಗೆ ಐಸೋಲೇಷನ್‌ ವಾರ್ಡ್‌ ಕುರಿತು ಜಾಗೃತಿ ಮೂಡಿಸದೇ ಇರುವುದರಿಂದ ಅವರು ತಾಳ್ಮೆ ಕಳೆದುಕೊಂಡು ವರ್ತಿಸುತ್ತಿದ್ದಾರೆ. ಸೋಂಕಿತರ ನಡುವೆ ಕೆಲಸ ಮಾಡಲು ಜೀವಭಯ ಉಂಟಾಗಿದೆ’ ಎಂದು ಶುಶ್ರೂಷಕಿಯರು ಅಸಹಾಯಕತೆ ವ್ಯಕ್ತಪಡಿಸಿದರು. ಅವರೊಂದಿಗೆ ಆಸ್ಪತ್ರೆಯ ಶುಷ್ರೂಷಕಿಯರು, ಗುತ್ತಿಗೆ ನೌಕರರು ಇದ್ದರು.

ಐಸೋಲೇಷನ್‌ ಸೌಕರ್ಯವಿಲ್ಲ: ‘ಐಸೋಲೇಷನ್‌ ವಾರ್ಡ್‌ನಲ್ಲಿರುವವರಿಗೆ ಚಿಕಿತ್ಸೆ ನೀಡುವ, ಊಟ, ಉಪಾಹಾರ ನೀಡುವ ಶುಷ್ರೂಷಕಿಯರು ಹಾಗೂ ಡಿ.ದರ್ಜೆ ನೌಕರರೂ ಮನೆಗೆ ಹೋಗದೇ ಐಸೋಲೇಷನ್‌ನಲ್ಲೇ ಇರಬೇಕು. ಆದರೆ ಅದಕ್ಕೆ ತಕ್ಕ ಸೌಕರ್ಯವನ್ನು ಆಸ್ಪತ್ರೆ ವತಿಯಿಂದ ಇನ್ನೂ ನೀಡಿಲ್ಲ. ನಾವು ಮನೆಗೆ ಹೋದರೆ ನಮ್ಮ ಮನೆ ಮಂದಿಗೂ ಸೋಂಕು ತಗುಲುವ ಅಪಾಯವಿದೆ’ ಎಂದು ಶುಶ್ರೂಷಕಿಯರು ಆತಂಕ ವ್ಯಕ್ತಪಡಿಸಿದರು.

ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಜಿಲ್ಲಾ ಸರ್ಜನ್‌ ಡಾ.ಬಸರೆಡ್ಡಿ, ‘ಇದು ಅನಿವಾರ್ಯ ಪರಿಸ್ಥಿತಿ. ಎಲ್ಲರೂ ಕೆಲಸ ಮಾಡಲೇಬೇಕು. ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಆತಂಕ ಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ಇಲಾಖೆ ಮತ್ತು ಜಿಲ್ಲಾಡಳಿತವಿರುತ್ತದೆ’ ಎಂದು ಭರವಸೆ ನೀಡಿದರು.

‘ಅಗತ್ಯ ಮಾಸ್ಕ್‌ಗಳು, ಗ್ಲೌಸ್‌ಗಳು ಸೇರಿದಂತೆ ಸುರಕ್ಷತಾ ಪರಿಕರಗಳನ್ನು ಈಗಾಗಲೇ ವಿತರಿಸಲಾಗಿದೆ. ಸೋಂಕಿತರು ಮತ್ತು ಶಂಕಿತ ಸೋಂಕಿತರೊಂದಿಗೆ ವೈದ್ಯರು ದೂರವಾಣಿ ಮೂಲಕ ಸಮಾಲೋಚನೆ ನಡೆಸುತ್ತಿದ್ದಾರೆ. ಸಿಬ್ಬಂದಿ ಭಯಪಡುವ ಅಗತ್ಯವಿಲ್ಲ’ ಎಂದು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.