ADVERTISEMENT

ಪಠ್ಯವಸ್ತು ಭಾಷಾಂತರ ಆತುರದ ಕ್ರಮ: ಬಿಕೆಸಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:01 IST
Last Updated 28 ಜೂನ್ 2019, 19:01 IST
ಪ್ರೊ.ಬಿ.ಕೆ.ಚಂದ್ರಶೇಖರ್‌
ಪ್ರೊ.ಬಿ.ಕೆ.ಚಂದ್ರಶೇಖರ್‌   

ಬೆಂಗಳೂರು: ‘ಶಾಲಾ ಶಿಕ್ಷಣದ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವುದು ಮತ್ತು ಎನ್‌ಸಿಇಆರ್‌ಟಿ ತಯಾರಿಸಿರುವ ಪಠ್ಯವಸ್ತುವನ್ನು ಭಾಷಾಂತರಿಸಿ ರಾಜ್ಯದ ಮಕ್ಕಳಿಗೆ ಅದನ್ನೇ ಪಠ್ಯಪುಸ್ತಕಗಳಾಗಿ ನಿಗದಿಪಡಿಸುವುದು ಆತುರದ ಕ್ರಮವಾಗಬಹುದು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪ್ರೊ.ಬಿ.ಕೆ.ಚಂದ್ರಶೇಖರ್‌ ತಿಳಿಸಿದ್ದಾರೆ.

‘ನಮ್ಮ ಸರ್ಕಾರ ಸಂವಿಧಾನದಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಲಭ್ಯವಿರುವ ಸ್ವತಂತ್ರವಾಗಿ ನಿರ್ಧರಿಸುವ ವಿಷಯಗಳ ಪಟ್ಟಿಯನ್ನು ಸರ್ವಥಾ ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಅನಿವಾರ್ಯ. ಸಂವಿಧಾನದ ಏಳನೇ ಅನುಸೂಚಿಯಲ್ಲಿ ‘ಕೇಂದ್ರ ಪಟ್ಟಿ’, ‘ರಾಜ್ಯ ಪಟ್ಟಿ‘ ಜೊತೆಗೆ ‘ಸಮವರ್ತಿ ಪಟ್ಟಿ’ ಸೂಚಿಸಿರುವುದು ದೇಶದ ಒಕ್ಕೂಟದ ವ್ಯವಸ್ಥೆಯ ಸ್ಪಷ್ಟ ಗುರುತು. ರಾಜ್ಯ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಶಿಕ್ಷಣ ಸಚಿವರು ಇಂತಹ ಪ್ರಮುಖ ಕಲ್ಪನೆಗೆ ಸಾಕಷ್ಟು ಗಮನ ಹರಿಸಿಲ್ಲವೆಂಬ ಅನುಮಾನ ಇದೆ’ ಎಂದು ಅವರು ತಿಳಿಸಿದ್ದಾರೆ.

‘ಚರಿತ್ರೆ, ನಮ್ಮ ದೇಶದ ಭೂಗೋಳದ ವೈಶಿಷ್ಟ್ಯ, ನಮ್ಮ ಸಮಾಜದ ವೈಶಿಷ್ಟ್ಯ, ರಾಜಕೀಯ, ಸಾಂಸ್ಕೃತಿಕಹಾಗೂ ನಾಗರಿಕತೆಯ ಬೆಳವಣಿಗೆಗಳನ್ನು ನಮ್ಮ ರಾಜ್ಯದ ವಿವಿಧ ವಲಯದ ತಜ್ಞರೇ ರಚಿಸಿದ ಪಠ್ಯವಸ್ತುಗಳನ್ನು ಅಧ್ಯಯನ ಮಾಡುವುದು ಅವಶ್ಯಕ. ಇವು ಇಡೀ ದೇಶಕ್ಕೆ ಸಾರಾಸಗಟಾಗಿ ಅನ್ವಯವಾಗುವ ವಿಷಯಗಳಲ್ಲ. ಬರಗೂರು ರಾಮಚಂದ್ರಪ್ಪ ಸಮಿತಿ ಈ ಹಿನ್ನೆಲೆಯಲ್ಲೇ ನಮ್ಮ ಶಾಲೆಗಳ ಪಠ್ಯಪುಸ್ತಕಗಳನ್ನು ತಯಾರಿಸಿದೆ. ಆದರೂ ಪರಿಷ್ಕರಣೆ ಅವಶ್ಯಕವೆಂದು ಕಂಡುಬಂದಾಗ ಸಂಬಂಧಪಟ್ಟ ಎಲ್ಲಾ ತಜ್ಞರೊಂದಿಗೆ ಸಮಾಲೋಚಿಸುವುದು ಯೋಗ್ಯವಾದ ಕ್ರಮ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ನೂತನ ಶಿಕ್ಷಣ ಸಚಿವರಾಗಿ ನೇಮಕವಾಗಿರುವ ಶ್ರೀನಿವಾಸ್ ಅವರು ಸಂಕೀರ್ಣತೆಯಿಂದ ಕೂಡಿದ ಶಾಲಾ ಶಿಕ್ಷಣದ ಮಾಹಿತಿ, ಬದಲಾವಣೆಗಳ ಸ್ವರೂಪ, ಅವುಗಳ ಪರಿಣಾಮಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ನೀತಿ, ನಿರ್ಧಾರಗಳನ್ನು ಪ್ರಕಟಿಸುವುದು ಸೂಕ್ತ’ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.