ADVERTISEMENT

ಸೇವಾನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ: ಶಿಕ್ಷಣ ತಜ್ಞರು ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಇಟಿ) ಸೇವಾನಿರತ ಶಿಕ್ಷಕರಿಗೂ ಕಡ್ಡಾಯಗೊಳಿಸಿರುವ ಸುಪ್ರೀಂಕೋರ್ಟ್‌ ತೀರ್ಪಿಗೆ ರಾಜ್ಯದ ಹಲವು ಶಿಕ್ಷಣ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಯಾವುದೇ ನೀತಿ ಅಥವಾ ಕಾನೂನಿನಲ್ಲಿರುವ ಅಂಶವನ್ನು ಪೂರ್ವಾನ್ವಯ ಜಾರಿಗೊಳಿಸುವುದು ಸಂವಿಧಾನ ಮತ್ತು ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ‘ಯಾವುದೇ ಶಾಸನದ ಅನುಷ್ಠಾನವನ್ನು ಎಂದಿಗೂ ಕೆಟ್ಟದ್ದೆಂದು ನೋಡಬಾರದು’ ಎಂಬ ಕೋರ್ಟ್‌ ಮಾತು ಒಪ್ಪಬಹುದಾದರೂ ಯಾವುದೆ ಕಾನೂನನ್ನು ಪೂರ್ವಾನ್ವಯಗೊಳಿಸುವುದೂ ಸಹ ನ್ಯಾಯ ಸಮ್ಮತವಲ್ಲ’ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಸಂಚಾಲಕ ವಿ.ಪಿ.ನಿರಂಜನಾರಾಧ್ಯ ಹೇಳಿದ್ದಾರೆ. 

ಎನ್‌ಸಿಟಿಇ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಜಾರಿಗೊಳಿಸುವ ಮುನ್ನವೇ ಸೇವೆಗೆ ಸೇರಿರುವ ಮತ್ತು ಸೇವಾ ಜ್ಯೇಷ್ಠತೆ ಆಧಾರದಲ್ಲಿ ಪದೋನ್ನತಿ ಬಯಸುವ ಶಿಕ್ಷಕರಿಗೆ ಇದನ್ನು ಕಡ್ಡಾಯಗೊಳಿಸುವುದು ಅನ್ಯಾಯವಾಗುತ್ತದೆ. ಸೇವಾನಿರತ ಶಿಕ್ಷಕರ ನೈತಿಕತೆ ಮತ್ತು ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡುತ್ತದೆ. ಕಲಿಕಾ ವ್ಯವಸ್ಥೆ ಮತ್ತು ಶಿಕ್ಷಣದ ಗುಣಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಎಂದಿದ್ದಾರೆ. 

ADVERTISEMENT

‘ಶಿಕ್ಷಕರ ಶೈಕ್ಷಣಿಕ ಅರ್ಹತೆ ಮತ್ತು ಅರ್ಹತಾ ಪರೀಕ್ಷೆಯನ್ನು ಸಮೀಕರಿಸಿ ನೋಡುವುದು ಸರಿಯಾದ ಕ್ರಮವಲ್ಲ. ತೀರ್ಪು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ತೊಡಕಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ದೇಶದ ಎಲ್ಲ ರಾಜ್ಯಗಳ ಸೇವಾನಿರತ ಶಿಕ್ಷರಿಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಅಖಿಲ ಭಾರತ ಪ್ರಾಥಮಿಕ ಶಿಕ್ಷರರ ಒಕ್ಕೂಟದ ಅಧ್ಯಕ್ಷ ಬಸವರಾಜ ಗುರಿಕಾರ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.