ADVERTISEMENT

ಪಠ್ಯಪುಸ್ತಕ ಸಮಿತಿ: ‍ಬೌದ್ಧಿಕತೆಯ ಪಳೆಯುಳಿಕೆ: ಜಿ.ರಾಮಕೃಷ್ಣ ಲೇವಡಿ

ಪಠ್ಯಪುಸ್ತಕ ಕೇಸರೀಕರಣ ಮತ್ತು ಶಿಕ್ಷಣದ ಕೋಮುವಾದೀಕರಣ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 19:38 IST
Last Updated 31 ಮೇ 2022, 19:38 IST
ಸ್ವಾತಂತ್ರ್ಯ ಉದ್ಯಾನದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಲೇಖಕ ಜಿ.ರಾಮಕೃಷ್ಣ ಭಾಗವಹಿಸಿದ್ದರು   – ಪ್ರಜಾವಾಣಿ ಚಿತ್ರ
ಸ್ವಾತಂತ್ರ್ಯ ಉದ್ಯಾನದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಲೇಖಕ ಜಿ.ರಾಮಕೃಷ್ಣ ಭಾಗವಹಿಸಿದ್ದರು   – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿಯಲ್ಲಿ ಇರುವ ಸದಸ್ಯರು ಬೌದ್ಧಿಕತೆಯ ಪಳೆಯುಳಿಕೆಗಳು. ಅವರ ಮನಸುಗಳು ಸಾವಿರ ವರ್ಷ ಹಳೆಯವು’ ಎಂದು ಸಾಹಿತಿ ಜಿ.ರಾಮಕೃಷ್ಣ ಲೇವಡಿ ಮಾಡಿದರು.

ಪಠ್ಯಪುಸ್ತಕ ಕೇಸರೀಕರಣ ಮತ್ತು ಶಿಕ್ಷಣದ ಕೋಮುವಾದೀಕರಣ ವಿರೋಧಿಸಿ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ, ವಿದ್ಯಾರ್ಥಿ ಸಂಘಟನೆಗಳ ಜಂಟಿ ವೇದಿಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಿತಿಯಲ್ಲಿ ಇರುವವರು ಯುವಕರಾಗಿದ್ದರೂ, ಅವರ ಮನಸುಗಳು ಸಾವಿರ ವರ್ಷ ಹಳೆಯದಾಗಿವೆ. ಯಜ್ಞದ ಬಗ್ಗೆ ಪಾಠವನ್ನು ಪುಸ್ತಕದಲ್ಲಿ ಸೇರಿಸಿದ್ದಾರೆ ಎಂದರೆ ಅವರ ಮನಸ್ಥಿತಿ ಏನು ಎಂಬುದು ಅರ್ಥವಾಗುತ್ತದೆ. ಸಮಕಾಲೀನ ವಿದ್ಯಮಾನಗಳನ್ನು ಹೇಗೆ ವಿಶ್ಲೇಷಣೆ ಮಾಡಬೇಕು ಎಂಬುದನ್ನು ಮಕ್ಕಳು ತಿಳಿದುಕೊಳ್ಳಬೇಕೆ ವಿನಾ ಯಜ್ಞದ ಬಗ್ಗೆಯಲ್ಲ’ ಎಂದರು.

ADVERTISEMENT

‘ಭಗತ್‌ ಸಿಂಗ್ ಬಗ್ಗೆ ಮಕ್ಕಳು ತಿಳಿದುಕೊಳ್ಳುವುದು ಬೇಡವೇ? ಅದನ್ನು ಬಿಟ್ಟು ಶುಕನಾಸನ ಉಪದೇಶ ಹೇಳಲು ಹೊರಟಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಮಕ್ಕಳ ತಲೆಗೆ ವಿಷ ತುಂಬಲು ಸರ್ಕಾರ ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಹಗಾರ ಶಿವಸುಂದರ್ ಮಾತನಾಡಿ, ‘ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ, ಅಮಿತ್ ಶಾ
ಗೃಹ ಮಂತ್ರಿ ಆಗುತ್ತಾರೆ ಎಂದರೆ ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ಆಗುವುದರಲ್ಲಿ ಆಶ್ಚರ್ಯ ಏನೂ ಇಲ್ಲ. ಇಂತಹ ಸಮಿತಿಯಿಂದ ನಾವು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ’ ರಾಮಕೃಷ್ಣ ಅವರು ಬಿಜೆಪಿ ನೇತೃತ್ವದ ಸರ್ಕಾರವನ್ನು ಕುಟುಕಿದರು.

‘66 ‌‍ಪುಟದ ರಾಷ್ಟ್ರೀಯ
ಶಿಕ್ಷಣ ನೀತಿ ಓದಿದರೆ ನೀತಿಯ ಹೂರಣ ಅರ್ಥವಾಗುತ್ತದೆ. ಈ ನೀತಿಯಲ್ಲಿ ‘ಸಂವಿಧಾನ’ ಎಂಬ ಪದ ಕೇವಲ 35 ಬಾರಿ ಇದ್ದರೆ, ‘ಸಂಪ್ರದಾಯ’ ಎಂಬ ಪದ 65 ಬಾರಿ ಇದೆ. ಜಾತ್ಯತೀತ, ಸಾಮಾಜಿಕ ನ್ಯಾಯ ಎಂಬ ಪದಗಳೇ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.