ರಾಜ್ಯದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆಯೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಮಾಡಿದ್ದ ಪಠ್ಯ ಪರಿಷ್ಕರಣೆ ಯನ್ನು ಕೈಬಿಟ್ಟು, ಬಂಡಾಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಿದ್ಧಪಡಿಸಿದ್ದ ಪಠ್ಯವನ್ನೇ ಪುನಃ ಜಾರಿಗೊಳಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.
2019ರಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಪಠ್ಯ ಪುಸ್ತಕಗಳಲ್ಲಿ ‘ಲೋಪ’ಗಳಿವೆ ಎಂದು ಪ್ರತಿಪಾದಿಸಿತ್ತು. ಅಲ್ಲದೇ 1ರಿಂದ 10ನೇ ತರಗತಿಯ ಭಾಷಾ ವಿಷಯಗಳು, ಪರಿಸರ ಅಧ್ಯಯನ ಹಾಗೂ 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಗಳಲ್ಲಿ ಇರಬಹುದಾದ ಸೂಕ್ಷ್ಮ–ಸಂಕೀರ್ಣ ವಿಷಯಗಳನ್ನು ಪರಿಶೀಲಿಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ 2021ರಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.
ಈ ಸಮಿತಿಗೆ ಪಠ್ಯ ಪರಿಷ್ಕರಣೆಯ ಅಧಿಕಾರ ಇರಲಿಲ್ಲ. ಪರಿಷ್ಕರಣೆ ಮಾಡಬೇಕಾದರೆ ವಿವಿಧ ಹಂತಗಳಲ್ಲಿ ಅಧ್ಯಯನ, ತಜ್ಞರ ಸಲಹೆ, ಹಲವು ಸುತ್ತಿನ ಸಭೆಗಳನ್ನು ನಡೆಸುವ ಸುದೀರ್ಘ ಕಾಲಾವಧಿಯ ಪ್ರಕ್ರಿಯೆ ನಡೆಸಬೇಕಿತ್ತು. ಅದು ಯಾವುದನ್ನೂ ಮಾಡದೇ, ಕೆಲವು ಪಠ್ಯಗಳನ್ನು ಕೈಬಿಟ್ಟು, ಕೆಲವನ್ನು ಸೇರ್ಪಡೆ ಮಾಡಿ ಒಂದೇ ವರ್ಷದಲ್ಲಿ ವರದಿ ನೀಡಿತ್ತು. ಪಠ್ಯಪುಸ್ತಕ ಮುದ್ರಣಗೊಂಡ ಬಳಿಕವಷ್ಟೇ, ಪರಿಶೀಲನಾ ಸಮಿತಿಗೆ ಪರಿಷ್ಕರಣೆಯ ಅಧಿಕಾರ ನೀಡಿದ ಘಟನೋತ್ತರ ಅನುಮೋದನೆ ನೀಡಲಾಗಿತ್ತು. ಶಿಕ್ಷಕರು, ಪೋಷಕರು ಹಾಗೂ ಆಸಕ್ತರ ಮುಂದೆ ಚರ್ಚೆಗೆ ಅವಕಾಶವನ್ನೇ ಕೊಡದೇ, ಪಠ್ಯಪುಸ್ತಕ ಮುದ್ರಣಕ್ಕೆ ರಹಸ್ಯವಾಗಿ ಆದೇಶ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಪ್ರಮಾದದ ಆರೋಪ
* ಹತ್ತನೇ ತರಗತಿ ಪಠ್ಯ ಪುಸ್ತಕದಲ್ಲಿ ಆರ್‌ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರ ಭಾಷಣ ಸೇರ್ಪಡೆ. ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’ ಸೇರಿದಂತೆ ಹಲವು ಪಠ್ಯಗಳನ್ನು ಕೈಬಿಟ್ಟು ಶಿವಾನಂದ ಕಳವೆ ಅವರ ‘ಸ್ವದೇಶಿ ಸೂತ್ರದ ಸರಳ ಹಬ್ಬ’ ಮತ್ತು ಎಂ. ಗೋವಿಂದ ಪೈ ಅವರ ‘ನಾನು ಪ್ರಾಸ ಬಿಟ್ಟ ಕಥೆ’, ವಿದ್ವಾಂಸ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಶನ ಉಪದೇಶ’ ಮತ್ತು ಶತಾವಧಾನಿ ಆರ್. ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಸೇರಿಸಲಾಗಿತ್ತು.
* ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಸಾಧನೆ ಪರಿಚಯಿಸುವ ಸುದೀರ್ಘ ಪಾಠವನ್ನು ಕತ್ತರಿಸಿ, ಒಂದು ಪ್ಯಾರಾಕ್ಕೆ ಇಳಿಸಲಾಗಿತ್ತು. ಜತೆಗೆ ಈ ಪಾಠವನ್ನು ಸಮಾಜ ವಿಜ್ಞಾನದಿಂದ ತೆಗೆದು, ಕನ್ನಡ ವಿಷಯಕ್ಕೆ ಸೇರಿಸಲಾಗಿತ್ತು. 12ನೇ ಶತಮಾನದ ಜಗಜ್ಯೋತಿ ಬಸವೇಶ್ವರ, ದಾಸಶ್ರೇಷ್ಠ ಕನಕದಾಸರು, ಡಾ. ಬಿ.ಆರ್. ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು ಅವರ ಕುರಿತ ವಿಷಯಗಳಲ್ಲೂ ಹಲವು ಅಂಶಗಳನ್ನು ಕೈಬಿಟ್ಟು, ಕೆಲವು ವಿಷಯಗಳನ್ನು ತಿದ್ದುಪಡಿ ಮಾಡುವ ಮೂಲಕ ಯಡವಟ್ಟು ಮಾಡಲಾಗಿತ್ತು.
* ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ವಿಚಾರವಾದಿ ಲೇಖಕ ಜಿ.ರಾಮಕೃಷ್ಣ ಅವರ ‘ಭಗತ್ ಸಿಂಗ್’ ಪಾಠವನ್ನು ಕೈಬಿಡಲಾಗಿತ್ತು. ‘ಯುವ ಬ್ರಿಗೇಡ್’ನ ಚಕ್ರವರ್ತಿ ಸೂಲಿಬೆಲೆ ಅವರು ಬರೆದಿರುವ ‘ತಾಯಿ ಭಾರತಿಯ ಅಮರಪುತ್ರರು’ ಪಾಠವನ್ನೂ ಸೇರಿಸಲಾಗಿತ್ತು.
‘ಬರಗೂರು ಸಮಿತಿಯ ಪಠ್ಯವನ್ನೇ ಮುಂದುವರಿಸಿ’
ಹಿಂದಿನ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದ ಸಂವಿಧಾನ ವಿರೋಧಿ ಪಠ್ಯಪುಸ್ತಕಗಳನ್ನು ತಕ್ಷಣ ತಡೆ ಹಿಡಿದು, ಹಿಂದೆ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಸಮಿತಿ ಸಿದ್ಧಪಡಿಸಿದ್ದ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು ಎಂದು ‘ಸಮಾನ ಮನಸ್ಕರ ಒಕ್ಕೂಟ’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಮುಖ್ಯಮಂತ್ರಿಯವರನ್ನು ಸೋಮವಾರ ಭೇಟಿ ಮಾಡಿದ ಒಕ್ಕೂಟದ ನಿಯೋಗ ಹತ್ತಾರು ಸಲಹೆಗಳಿರುವ ಪತ್ರವನ್ನು ನೀಡಿದೆ. ಒಕ್ಕೂಟದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ,ಕೆ.ಮರುಳಸಿದ್ದಪ್ಪ, ಬಂಜಗೆರೆ ಜಯಪ್ರಕಾಶ್, ಎಸ್. ಜಾಫೆಟ್ ಮೊದಲಾದವರಿದ್ದರು.
‘ಜಾತಿ ಗರ್ವಾಂಧತೆಯ ಹೊಲಸು ತುಂಬಿದ ಪಠ್ಯಪುಸ್ತಕಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ತಜ್ಞರ ಸಮಿತಿ ರಚಿಸಿ, ಹೊಸ ಪಠ್ಯಪುಸ್ತಕಗಳನ್ನು ರೂಪಿಸಬೇಕು. ಅದಕ್ಕೆ ಸಮಯ ಇಲ್ಲದಿದ್ದರೆ ಹಿಂದಿನ ಪಠ್ಯಗಳನ್ನೇ ಈ ವರ್ಷವೂ ಬೋಧಿಸಬೇಕು. ಎನ್‌ಇಪಿ ರದ್ದುಪಡಿಸಿ, ಹೊಸ ಶಿಕ್ಷಣ ವ್ಯವಸ್ಥೆ ರೂಪಿಸಬೇಕು’ ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.