ADVERTISEMENT

ಕೈಗಾರಿಕಾ ಭೂಮಿ ನೋಂದಣಿ ಶುಲ್ಕ ಇಳಿಕೆ; ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

₹20 ಲಕ್ಷಕ್ಕೂ ಕಡಿಮೆ ಮೌಲ್ಯದ ಫ್ಲಾಟ್‌ಗಳಿಗೂ ಅನ್ವಯ * ಶೇ 2 ರಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 10:26 IST
Last Updated 12 ನವೆಂಬರ್ 2020, 10:26 IST
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ   

ಬೆಂಗಳೂರು: ಸಂಪನ್ಮೂಲ ಸಂಗ್ರಹವನ್ನು ಹೆಚ್ಚಿಸುವ ಉದ್ದೇಶದಿಂದ ಕೈಗಾರಿಕಾ ಭೂಮಿಯ ನೋಂದಣಿ ಶುಲ್ಕ ಮತ್ತು ₹20 ಲಕ್ಷಕ್ಕೂ ಕಡಿಮೆ ಮೌಲ್ಯದ ಫ್ಲಾಟ್‌ಗಳ ನೋಂದಣಿ ಶುಲ್ಕದ ದರವನ್ನು ಶೇ 2 ರಷ್ಟು ಇಳಿಕೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಪ್ರಸ್ತುತ ಕೈಗಾರಿಕಾ ಭೂಮಿಯ ನೊಂದಣಿ ಶುಲ್ಕ ಶೇ 5 ಇದ್ದು ಅದನ್ನು ಶೇ 3 ಕ್ಕೂ, ₹20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲಾಟ್‌ಗಳ ನೋಂದಣಿಯಲ್ಲೂ ಶೇ 3ಕ್ಕೆ ಇಳಿಸಲಾಗುವುದು. ಇದರಿಂದ ನೋಂದಣಿ ಪ್ರಮಾಣ ಹೆಚ್ಚಾಗುತ್ತದೆ. ಹೆಚ್ಚು ಮೌಲ್ಯದ ಫ್ಲಾಟ್‌ಗಳಿಗೆ ಅನ್ವಯವಾಗುವುದಿಲ್ಲ ಎಂದು ಅವರು ಹೇಳಿದರು.

ADVERTISEMENT

ಸಂಪುಟ ಉಪಸಮಿತಿ: ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರ ಶಿಫಾರಸು ಮಾಡುವ ಮತ್ತು ಡಾ.ಕಸ್ತೂರಿ ರಂಗನ್ ವರದಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಯಿತು.

ಈ ಸಮತಿಯಲ್ಲಿ ಅರಣ್ಯ ಸಚಿವರು, ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಸೇರಿ ಒಟ್ಟು ಆರು ಸಚಿವರು ಸದಸ್ಯರಾಗಿರುತ್ತಾರೆ. ಅರಣ್ಯ ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ. ಅರಣ್ಯ ಸಚಿವರು ಬದಲಾವಣೆ ಆಗಿರುವ ಕಾರಣ ಸಂಪುಟ ಉಪಸಮಿತಿ ಪುನರ್‌ ರಚನೆ ಮಾಡಲಾಗಿದೆ.

ಮಾದನಾಯಕನಹಳ್ಳಿ ಮತ್ತು ಹೂಟಗಳ್ಳಿ ನಗರಸಭೆಗಳಾಗಿ ಮೇಲ್ದರ್ಜೆಗೆ
ಬೆಂಗಳೂರು:
ಬೆಂಗಳೂರು ನಗರ ಜಿಲ್ಲೆಯ ಮಾದನಾಯಕನಹಳ್ಳಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವುದರ ಜತೆಗೆ ಮೈಸೂರಿನ ಹೂಟಗಳ್ಳಿಯನ್ನೂ ನಗರಸಭೆಯನ್ನಾಗಿ ರೂಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮಾದನಾಯಕನಹಳ್ಳಿ ವ್ಯಾಪ್ತಿಗೆ ಬರುವ ಲಕ್ಷ್ಮೀಪುರ, ಚಿಕ್ಕಬಿದರಕಲ್ಲು ಮತ್ತು ಶ್ರೀಕಂಠಪುರ ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆ ಮಾಡಿ ಮಾದನಾಯಕನಹಳ್ಳಿಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಅದೇ ರೀತಿ ಮೈಸೂರಿನ ಕೂರ್ಗಳ್ಳಿ, ಹೆಬ್ಬಾಳ ಕೈಗಾರಿಕಾ ಪ್ರದೇಶ, ಬೆಳವಾಡಿ, ಹಿನಕಲ್ ಗ್ರಾಮಪಂಚಾಯಿತಿಗಳನ್ನು ಸೇರಿಸಿ ಹೂಟಗಳ್ಳಿ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಯಿತು ಎಂದರು.

ಹೊಸ ಪಟ್ಟಣ ಪಂಚಾಯಿತಿಗಳು: ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ರಾಮನಗರ ಜಿಲ್ಲೆಯ ಹಾರೊಹಳ್ಳಿ, ಹೊಳೆಹೊನ್ನೂರು, ದಕ್ಷಿಣಕನ್ನಡ ಜಿಲ್ಲೆಯ ಬಜ್ಪೆ, ಮೈಸೂರು ಜಿಲ್ಲೆಯ ಶ್ರೀರಾಂಪುರ, ಬೋಗಾದಿ, ಕಡಕೊಳ, ರಮ್ಮನಹಳ್ಳಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿಯ ಪುರಸಭೆ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ವಿಜಯಪುರ ಜಿಲ್ಲೆಯ ಸಿಂಧಗಿ ಪುರಸಭೆ ವ್ಯಾಪ್ತಿಗೆ ಇನ್ನಷ್ಟು ಪ್ರದೇಶಗಳನ್ನು ಸೇರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.