ADVERTISEMENT

ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಮುಂದಿಟ್ಟ ಸರ್ಕಾರ

ಒಬಿಸಿ ಪಟ್ಟಿಗೆ ‘ವೀರಶೈವ ಲಿಂಗಾಯತ’ ಸೇರ್ಪಡೆಗೆ ಟಿಪ್ಪಣಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 0:16 IST
Last Updated 6 ಡಿಸೆಂಬರ್ 2020, 0:16 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ‘ರಾಜ್ಯ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಆಯೋಗ ತನ್ನ ವರದಿಯಲ್ಲಿ ನೀಡಿರುವ ತುಲನಾತ್ಮಕ ಪಟ್ಟಿಯಲ್ಲಿರುವ ಈಡಿಗ, ದೇವಾಡಿಗ, ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ (ಗ್ರಾಮೀಣ ಪ್ರದೇಶ ಮಾತ್ರ), ತಿಗಳ, ದೇವಾಂಗ, ಬಲಿಜ ಸಮುದಾಯ/ಜಾತಿಗಳನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಅದೇ ಪಟ್ಟಿಯಲ್ಲಿರುವ ‘ವೀರಶೈವ ಲಿಂಗಾಯತ’ ಸಮುದಾಯವನ್ನು ಸೇರಿಸಿಲ್ಲ. ಹೀಗಾಗಿ, ಈ ಸಮುದಾಯವನ್ನೂ ಕೇಂದ್ರ ಸರ್ಕಾರ ತನ್ನ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು’ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸೂಚನೆಯಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಗಾಗಿ ತರಾತುರಿಯಲ್ಲಿ ಸಿದ್ಧಪಡಿಸಿದ್ದ ‘ರಹಸ್ಯ’ ಟಿಪ್ಪಣಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ. ಇದೇ ಟಿಪ್ಪಣಿಯ ಆಧಾರದಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿತ್ತು.

ಸುಪ್ರೀಂ ಕೋರ್ಟ್‌ 1961 (ಬಾಲಾಜಿ ವರ್ಸಸ್‌ ಕರ್ನಾಟಕ ಸರ್ಕಾರ) ಮತ್ತು 1992ರಲ್ಲಿ (ಇಂದಿರಾ ಸಹಾನಿ ವರ್ಸಸ್‌ ಕೇಂದ್ರ ಸರ್ಕಾರ) ನೀಡಿರುವ ತೀರ್ಪುಗಳಲ್ಲಿ ಸಾಮಾಜಿಕ, ಆರ್ಥಿಕ ಅಂಶಗಳ ಆಧಾರದ ಮೇಲೆ ಒಬಿಸಿ ಪಟ್ಟಿ ರೂಪಿಸಬೇಕು ಎಂದು ಆದೇಶಿಸಿದೆ. ಅಂದರೆ, ಕಸುಬು (ಸಾಮಾಜಿಕ), ಬಡತನ (ಆರ್ಥಿಕ), ಅನಕ್ಷರತೆ (ಶೈಕ್ಷಣಿಕ) ಕ್ಷೇತ್ರಗಳಲ್ಲಿ ಹಿಂದುಳಿದಿರುವಿಕೆ ಆಧರಿಸಿ ಒಬಿಸಿ ಪಟ್ಟಿ ರೂಪಿಸಿದೆ. ಈ ಸಂಬಂಧ, ಚಿನ್ನಪ್ಪ ರೆಡ್ಡಿ ಆಯೋಗ ರಚಿಸಿದ್ದು, ಆಯೋಗದ ಭಾಗ–2ರ ವರದಿಯಲ್ಲಿ ತುಲಾನಾತ್ಮಕ ಪಟ್ಟಿ ಇದೆ ಎಂದೂ ಟಿಪ್ಪಣಿಯಲ್ಲಿದೆ.

ADVERTISEMENT

ಸದ್ಯ ಕರ್ನಾಟಕದಲ್ಲಿನ ಕೇಂದ್ರ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಕೆಲವು ಉಪ ಜಾತಿಗಳನ್ನು ಮಾತ್ರ ಸೇರಿಸಲಾಗಿದೆ. ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ 2002ರ ಒಬಿಸಿ ಪಟ್ಟಿಯಲ್ಲಿ ಇಡೀ ವೀರಶೈವ–ಲಿಂಗಾಯತ (ಪ್ರವರ್ಗ ವರ್ಗ–3 ಬಿ ಕ್ರಮ ಸಂಖ್ಯೆ 1 (1ಎ) ಮತ್ತು ಉಪ ಜಾತಿಗಳು 1(ಬಿ) ಸಮುದಾಯವನ್ನು ಸೇರಿಸ
ಲಾಗಿದೆ. ಹೀಗಾಗಿ, ಇಡೀ ವೀರಶೈವ ಲಿಂಗಾಯತ ಸಮುದಾಯವನ್ನು (ಎಲ್ಲ ಉಪಜಾತಿ, ಪಂಗಡ
ಗಳನ್ನು ಒಳಗೊಂಡಂತೆ) ಕೇಂದ್ರದ ಒಬಿಸಿ ಪಟ್ಟಿ
ಯಲ್ಲಿ ಸೇರಿಸಲು ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದೂ ಟಿಪ್ಪಣಿಯಲ್ಲಿ ಸಮರ್ಥನೆ ನೀಡಲಾಗಿದೆ.

ಕೇಂದ್ರ ಸರ್ಕಾರದ ಹಿಂದುಳಿದ ವರ್ಗ
ಗಳ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯ
ವನ್ನು ಸೇರಿಸದೇ ಇರುವುದರಿಂದ ಕೇಂದ್ರ ಲೋಕಸೇವಾ ಆಯೋಗ, ಸಿಬ್ಬಂದಿ ನೇಮಕಾತಿ ಆಯೋಗ, ರೈಲ್ವೆ ಇತ್ಯಾದಿ ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವೀರಶೈವ ಲಿಂಗಾಯತ ಸಮದಾಯದ ಪ್ರಾತಿನಿಧ್ಯ ಅಲ್ಪ ಪ್ರಮಾಣದಲ್ಲಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಪ್ರಮುಖವಾಗಿ ಗ್ರಾಮೀಣ ನಿವಾಸಿಗಳಾಗಿದ್ದು, ಮಳೆ ಆಧಾರಿತ ವ್ಯವಸ್ಥೆ ಅವಲಂಬಿತರಾಗಿದ್ದಾರೆ. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸದೇ ಇರುವುದರಿಂದ ಮೀಸಲಾತಿ ಸವಲತ್ತು ಪಡೆಯಯವಲ್ಲಿ ವೀರಶೈವ ಸಮುದಾಯದ ಬಡ ಅರ್ಹ ಜನಾಂಗ ಅವಕಾಶ ವಂಚಿತವಾಗಿದೆ ಎಂದೂ ಸಮರ್ಥಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.