
ಹೈಕೋರ್ಟ್
ಬೆಂಗಳೂರು: ‘ಸಹಜ ನ್ಯಾಯತತ್ವ ಪಾಲಿಸದೆ ಯಾವುದೇ ವ್ಯಕ್ತಿ ಅಥವಾ ಗುತ್ತಿಗೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವಂತಿಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ನಗರದ ಮೆಸರ್ಸ್ ಸುಜಲಾ ಫಾರ್ಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ. ಕೋವಿಡ್-19ರ ಸಾಂಕ್ರಾಮಿಕ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಸ್ಯಾನಿಟೈಜರ್ ಪೂರೈಸಿದ ಆರೋಪದಡಿ ಸುಜಲ್ ಫಾರ್ಮಾ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ‘ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ ನಿಯಮಿತ’ದ ಕ್ರಮವನ್ನು ರದ್ದುಪಡಿಸಿದೆ.
‘ಅರ್ಜಿದಾರರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿಲ್ಲ. ಎರಡು ನೋಟಿಸ್ ನೀಡಿದ್ದರೂ ಅದರಲ್ಲಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಯಾವುದೇ ಇಂಗಿತ ವ್ಯಕ್ತಪಡಿಸಿಲ್ಲ. ನಿಯಮದಂತೆ ಶೋಕಾಸ್ ನೋಟಿಸ್ ನೀಡಬೇಕು. ಅದರಲ್ಲಿ ನಿಮ್ಮನ್ನು ಕಪ್ಪುಪಟ್ಟಿಗೆ ಯಾಕೆ ಸೇರಿಸಬಾರದು ಎಂಬುದನ್ನು ಕಾರಣಗಳ ಸಹಿತ ವಿವರಿಸಬೇಕು ಎಂದು ಕೇಳಿರಬೇಕು. ತದನಂತರವೇ ಅಂತಿಮ ಆದೇಶ ಹೊರಡಿಸಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ನಿಯಮಗಳನ್ನು ಪಾಲನೆ ಮಾಡದೇ ಇರುವುದರಿಂದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಆದೇಶ ರದ್ದುಗೊಳಿಸಲಾಗುತ್ತಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.