ADVERTISEMENT

ಚಾಮರಾಜನಗರ ದುರಂತ | ದಾಖಲೆಗಳನ್ನು ತಿರುಚಲಾಗಿದೆ ಎಂದು ಸಮಿತಿ ಸಂಶಯ

ಹೈಕೋರ್ಟ್‌ಗೆ ತ್ರಿಸದಸ್ಯ ಸಮಿತಿ ವರದಿ

​ಪ್ರಜಾವಾಣಿ ವಾರ್ತೆ
Published 13 ಮೇ 2021, 20:40 IST
Last Updated 13 ಮೇ 2021, 20:40 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಚಾಮರಾಜನಗರ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 24 ಮಂದಿ ಮೃತಪಟ್ಟ ದುರಂತಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ತಿರುಚಲಾಗಿದೆ’ ಎಂದು ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ತ್ರಿಸದಸ್ಯ ಸಮಿತಿ ಅನುಮಾನ ವ್ಯಕ್ತಪಡಿಸಿದೆ. ದುರಂತಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಸಂರಕ್ಷಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ನಿರ್ವಹಣೆಯ ರಿಜಿಸ್ಟರ್ ಪುಸ್ತಕ ಗಮನಿಸಿದರೆ ದಾಖಲೆ ತಿರುಚಿರುವುದು ಗಮನಕ್ಕೆ ಬರುತ್ತಿದೆ. 6 ಕಿಲೋ ಲೀಟರ್ ಸಾಮರ್ಥ್ಯದ ಎಲ್‌ಎಂಒ ಟ್ಯಾಂಕ್ ಅನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆ ಆವರಣದಲ್ಲಿ ಅಳವಡಿಸಲಾಗಿದೆ. ಆದರೂ, ಈ ಟ್ಯಾಂಕ್‌ಗೆ ಮೊದಲ ಬಾರಿಗೆ 2021ರ ಏಪ್ರಿಲ್ 29ರಂದು ಎಲ್‌ಎಂಒ ತುಂಬಿಸಲಾಗಿದೆ. ಬಳಿಕ ಮೇ 1ರಂದು ಎರಡನೇ ಬಾರಿ ತುಂಬಿಸಲಾಗಿದೆ. ಆದರೆ, 30 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅದು ಖಾಲಿಯಾಗಿದೆ ಎಂದು ದಾಖಲಿಸಲಾಗಿದೆ.

‘ಏ.29ರಿಂದ ಎಲ್‌ಎಂಒ ನಿರ್ವಹಿಸುತ್ತರುವ ರಿಜಿಸ್ಟರ್ ಪುಸ್ತಕ ಮತ್ತು ಬಯೋ ಮೆಡಿಕಲ್ ಎಂಜಿನಿಯರ್ ನಿರ್ವಹಿಸುತ್ತಿರುವ ಆಮ್ಲಜನಕ ಬಳಕೆ ರಿಜಿಸ್ಟರ್ ಪುಸ್ತಕಗಳನ್ನು ಗಮನಿಸಿದರೆ ದಾಖಲೆಗಳನ್ನು ನಾಶ ಮಾಡಿರುವುದು ಗಮನಕ್ಕೆ ಬರುತ್ತದೆ. ಎಲ್‌ಎಂಒ ರಿಜಿಸ್ಟರ್ ಪುಸ್ತಕದಲ್ಲಿನ ಪುಟ ಸಂಖ್ಯೆ 3 ಮತ್ತು 4 ಕಾಣೆಯಾಗಿದೆ’ ಎಂದು ವರದಿ ಹೇಳಿದೆ.

ADVERTISEMENT

‘ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 40 ಸಿಲಿಂಡರ್ ಲಭ್ಯವಿದ್ದರೂ, ಮೇ 3ರ ಬೆಳಿಗ್ಗೆ 6 ಗಂಟೆಗಷ್ಟೇ ಅವು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತಲುಪಿವೆ. ಸಿಸಿಟಿವಿ ದೃಶ್ಯಗಳು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ಸಂರಕ್ಷಣೆ ಮಾಡಬೇಕು’ ಎಂದು ಮುಖ್ಯ ಕಾರ್ಯದರ್ಶಿಗೆ ಸಮಿತಿ ಶಿಫಾರಸು ಮಾಡಿದೆ.

‘ದುರಂತಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಸಂರಕ್ಷಣೆ ಮಾಡಬೇಕು’ ಎಂದು ಮುಖ್ಯ ನ್ಯಾಯಮುರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರನ್ನು ಒಳಗೊಂಡ ಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತು.

‘ಮೃತಪಟ್ಟವರಿಗೆ ಸಂಬಂಧಿಸಿದ ಕೇಸ್ ಶೀಟ್‌ಗಳಲ್ಲೂ ವ್ಯತ್ಯಾಸ ಆಗಿರುವುದು ಗಮನಕ್ಕೆ ಬಂದಿದೆ. 28 ಕೇಸ್ ಶೀಟ್‌ಗಳನ್ನು ಒಬ್ಬ ವೈದ್ಯರೇ ದಾಖಲಿಸಿದ್ದರೆ, ಒಂದು ಕೇಸ್‌ ಶೀಟ್ ಅನ್ನು ಮಾತ್ರ ಬೇರೆ ವೈದ್ಯರು ನಮೂದಿಸಿದ್ದಾರೆ. ಸಾವಿನ ಸಮಯ ಮತ್ತು ದಿನಾಂಕ ಸೇರಿ ಕೆಲ ವಾಸ್ತವ ವಿವರಗಳನ್ನು ಉಲ್ಲೇಖಿಸಿಲ್ಲ. ಮುದ್ರಿತ ಕೆಲ ಕಾಲಂಗಳು ಖಾಲಿ ಇದ್ದರೂ ವೈದ್ಯಾಧಿಕಾರಿ ಸಹಿ ಒಳಗೊಂಡಿದೆ’ ಎಂದು ವರದಿ ತಿಳಿಸಿದೆ.

ಪರಿಹಾರ ಕೊಡಿ: ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಮಂದಿನ ವಿಚಾರಣೆಯೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು.

ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವುಗಳಿಗೆ ಪರಿಹಾರ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ನೆನಪಿಸಿದ ಪೀಠ, ‘ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿನ ಜೀವಿಸುವ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿರುವ ಕಾರಣ ಪರಿಹಾರ ನೀಡಬೇಕು’ ಎಂದು ಹೇಳಿತು.

ಚಾಮರಾಜನಗರದ ಜಿಲ್ಲಾ ಕೋವಿಡ್‌ ಆಸ್ಪತ್ರೆ

ಶಿಫಾರಸುಗಳು

* ಆಮ್ಲಜನಕ ಹಂಚಿಕೆ ಮತ್ತು ವಿತರಣೆ ವ್ಯವಸ್ಥೆ ಮೇಲುಸ್ತುವಾರಿ ವಹಿಸಲು ಜಿಲ್ಲಾಧಿಕಾರಿಗಿಂತ ಉನ್ನತ ಅಧಿಕಾರಿಯನ್ನು ನೇಮಿಸಬೇಕು

* ಎಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 24 ಗಂಟೆಗಳಿಗೆ ಸಾಕಾಗುವಷ್ಟು ಆಮ್ಲಜನಕ ಸಂಗ್ರಹ ಇರುವಂತೆ ನೋಡಿಕೊಳ್ಳಬೇಕು

* ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದರೆ ಅಂತಹ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಬೇಕು

* ಆಮ್ಲಜನಕ ನಿರ್ವಹಣೆ ಕುರಿತು ದಾಖಲು ಮಾಡುವ ವಿಧಾನ ರಾಜ್ಯದಾದ್ಯಂತ ಏಕರೂಪದಲ್ಲಿ ಇರಬೇಕು. ಎಷ್ಟು ಆಮ್ಲಜನಕ ಲಭ್ಯವಿದೆ ಎಂಬುದರ ಮಾಹಿತಿಯನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಫಲಕದಲ್ಲಿ ಪ್ರದರ್ಶಿಸಬೇಕು

* ಸಂಭವನೀಯ ಮೂರನೇ ಅಲೆ ಗಮನದಲ್ಲಿಟ್ಟುಕೊಂಡು ಎಲ್ಲಾ ಆಸ್ಪತ್ರೆಗಳಲ್ಲಿ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಬೇಕು

* ಆಮ್ಲಜನಕ ಬಳಕೆ ಬಗ್ಗೆ ಕೈಪಿಡಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತಜ್ಞರಿಂದ ಸಿದ್ಧಪಡಿಸಬೇಕು

‌* ಆಮ್ಲಜನಕ ಸಿಲಿಂಡರ್ ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.