ಬೆಂಗಳೂರು:ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 8 ಕೋವಿಡ್–19 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದ್ದ 8 ಮಂದಿ, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಮಾ.9ರಂದು ಮೊದಲು ಕಾಣಿಸಿಕೊಂಡಿದ್ದ ಈ ಸೋಂಕು ಈಗ ವಿವಿಧ ಜಿಲ್ಲೆಗಳಿಗೆ ವ್ಯಾಪಿಸಿಕೊಳ್ಳುತ್ತಿರುವ ಜತೆಗೆ ದಿನದಿಂದ ದಿನಕ್ಕೆಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೊಸದಾಗಿ ಮಂಗಳೂರಿನಲ್ಲಿ 4, ಉತ್ತರ ಕನ್ನಡದಲ್ಲಿ 2, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿತಲಾ ಒಂದು ಪ್ರಕರಣ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.
ಈವರೆಗೆ ಗುಣಮುಖರಾದ ಮೂವರನ್ನು ಆಸ್ಪತ್ರೆಗಳಿಂದ ಬಿಡುಗಡೆಮಾಡಲಾಗಿದೆ.ಇದರಿಂದಾಗಿ ಒಟ್ಟು 37 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
48 ಮಂದಿಯನ್ನು ಸೋಂಕು ಶಂಕೆ ಹಿನ್ನೆಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 377 ಮಂದಿಗೆ ಮನೆಯಲ್ಲಿಯೇ ಪ್ರತ್ಯೇಕ ವಾಸಕ್ಕೆ ಸೂಚಿಸಲಾಗಿದೆ.ಮಾ.20ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ಕಾಸರಗೋಡಿನ 32 ವರ್ಷದ ವ್ಯಕ್ತಿಗೆ ಸೋಂಕು ಇರುವುದು ಖಚಿತಪಟ್ಟಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಾ.18 ಹಾಗೂ ಮಾ.21ರಂದು ದುಬೈನಿಂದ ಬಂದಿದ್ದ ಉತ್ತರ ಕನ್ನಡದ 65 ವರ್ಷ ಹಾಗೂ 40 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮಾ.14ರಂದು ಸೌದಿ ಅರೇಬಿಯಾದ ಮೆಕ್ಕಾಗೆ ಹೋಗಿ ಬಂದಿದ್ದ ರೋಗಿ 19 ಮತ್ತು ರೋಗಿ 22ರ ಕುಟುಂಬದ ಸದಸ್ಯರಾಗಿರುವ ಚಿಕ್ಕಬಳ್ಳಾಪುರದ 56 ವರ್ಷದ ಮಹಿಳೆ, 13ನೇ ರೋಗಿಯ ಸಂಪರ್ಕ ಹೊಂದಿದ್ದ 56 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ದುಬೈಗೆ ಪ್ರಯಾಣ ಮಾಡಿ ಬಂದಿದ್ದ 47 ವರ್ಷದ ಮಹಿಳೆ ರೋಗಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೌದಿ ಅರೇಬಿಯಾದಿಂದ ಬಂದಿದ್ದ ಕಾಸರಗೋಡಿನ 70 ವರ್ಷದ ಮಹಿಳೆ ಹಾಗೂ ಮಾ.21ಕ್ಕೆ ದುಬೈನಿಂದ ಮಂಗಳೂರಿಗೆ ಬಂದಿದ್ದ 23 ವರ್ಷದ ವ್ಯಕ್ತಿಗೂ ಸೋಂಕು ತಗುಲಿದೆ. ಇವರೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿರುವವರನ್ನು ಪತ್ತೆ ಮಾಡಲಾಗುತ್ತಿದೆ.
ಕೇರಳದ ಪ್ರಯಾಣಿಕರು: ರಾಜ್ಯದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ 6 ಮಂದಿ ಕೇರಳಕ್ಕೆ ಪ್ರಯಾಣ ಮಾಡುತ್ತಿದ್ದವರಾಗಿದ್ದರು.
ರಾಜ್ಯದಲ್ಲಿ ಈವರೆಗೆ 1,27,941 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆರೋಗ್ಯ ಸಹಾಯವಾಣಿ 104ಕ್ಕೆ ಕೋವಿಡ್–19 ಕುರಿತ ಕರೆಗಳಿಗಾಗಿ 210 ಆಸನಗಳನ್ನು ಮೀಸಲಿರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.