ADVERTISEMENT

149ಕ್ಕೆ ತಲುಪಿದ ಮಂಗನ ಕಾಯಿಲೆ ಪೀಡಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 20:30 IST
Last Updated 23 ಮಾರ್ಚ್ 2020, 20:30 IST

ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಹೊಸದಾಗಿ ನಾಲ್ವರಲ್ಲಿ ಮಂಗನ ಕಾಯಿಲೆ (ಕೆ.ಎಫ್‌.ಡಿ) ಇರುವುದು ದೃಢಪಟ್ಟಿದ್ದು, ಪ್ರಸಕ್ತ ವರ್ಷ ಈ ಕಾಯಿಲೆಗೆ ತುತ್ತಾದವರ ಸಂಖ್ಯೆ 149ಕ್ಕೆ ತಲುಪಿದೆ.

ತೀರ್ಥಹಳ್ಳಿ, ಸಾಗರ ತಾಲ್ಲೂಕಿನ ಅತಿ ಹೆಚ್ಚು ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ. ಮೂರು ತಿಂಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಕಳೆದ ವರ್ಷ 18 ಜನ ಕೆ.ಎಫ್‌.ಡಿ ವೈರಸ್‌ಗೆ ಜೀವ ತೆತ್ತಿದ್ದರು.

ಜಿಲ್ಲೆಯ ಮೂರು ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಡಿ.ಎಂ.ಪಿ ತೈಲ ವಿತರಿಸಲಾಗಿದೆ. 4 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. ಡಿಸೆಂಬರ್‌ನಿಂದ ಆರೋಗ್ಯ ಕಾರ್ಯಕರ್ತರು, ವೈದ್ಯರು ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಆದರೂ, ಕಾಯಿಲೆ ನಿರಂತರವಾಗಿ ಹಬ್ಬುತ್ತಿದೆ. ಮೂರು ಡೋಸ್‌ ಲಸಿಕೆ ತೆಗೆದುಕೊಂಡವರಲ್ಲೂ ವೈರಸ್‌ ತಗುಲಿರುವುದು ಮಲೆನಾಡಿನ ಜನರ ಆತಂಕವನ್ನು ಹೆಚ್ಚಿಸಿದೆ. ಕಾಯಿಲೆ ನಿವಾರಣೆಗೆ ನಿರ್ದಿಷ್ಟ ಲಸಿಕೆ ಸಂಶೋಧಿಸುವಂತೆ ಸರ್ಕಾರದ ಮೇಲೆ ಜನ ಒತ್ತಡ ಹಾಕುತ್ತಿದ್ದಾರೆ.

ADVERTISEMENT

ಮತ್ತೊಬ್ಬರಿಗೆ ಮಂಗನ ಕಾಯಿಲೆ ದೃಢ: ಚಿಕ್ಕಮಗಳೂರು ಜಿಲ್ಲೆಯನರಸಿಂಹರಾಜಪುರ ತಾಲ್ಲೂಕಿನ ಮಡಬೂರು ಎಸ್ಟೇಟ್‌ ಸಮೀಪದ ಗಾಂಧಿ ಗ್ರಾಮದ 53 ವರ್ಷ ವಯಸ್ಸಿನ ವ್ಯಕ್ತಿಗೆ ಮಂಗನ ಕಾಯಿಲೆ ದೃಢಪಟ್ಟಿದೆ.

‘ವ್ಯಕ್ತಿಯ ರಕ್ತದ ಮಾದರಿಯನ್ನು ಶಿವಮೊಗ್ಗದ ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ರೋಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಪಂದಿಸುತ್ತಿದ್ದಾರೆ’ ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವೀರಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವರ್ಷ ಫೆ.7ರಂದು ಮಡಬೂರು ಎಸ್ಟೇಟ್‌ನಲ್ಲಿ ಮೊದಲ ಮಂಗನ ಕಾಯಿಲೆಪ್ರಕರಣ ಕಂಡು ಬಂದಿತ್ತು. ಈವರೆಗೆ ಒಟ್ಟು 10 ಮಂದಿಗೆ ಮಂಗನ ಕಾಯಿಲೆ ದೃಢಪಟ್ಟಿದ್ದು, ಒಂಬತ್ತು ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.