ADVERTISEMENT

ಪಕ್ಷಾತೀತ ಹೋರಾಟಕ್ಕೆ ಸಿದ್ಧ: ಸತೀಶ ಜಾರಕಿಹೊಳಿ

ವಾಲ್ಮೀಕಿ ಶ್ರೀಗಳ ಧರಣಿ ಸತ್ಯಾಗ್ರಹ ಐದನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 20:15 IST
Last Updated 14 ಫೆಬ್ರುವರಿ 2022, 20:15 IST
ಬೆಂಗಳೂರಿನಲ್ಲಿ ಸೋಮವಾರ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಸಚಿವ ಬಿ. ಶ್ರೀರಾಮುಲು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿದ್ದರು
ಬೆಂಗಳೂರಿನಲ್ಲಿ ಸೋಮವಾರ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಸಚಿವ ಬಿ. ಶ್ರೀರಾಮುಲು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿದ್ದರು   

ಬೆಂಗಳೂರು: ‘ನಾವು ಅಧಿಕಾರದಲ್ಲಿದ್ದಾಗ ಮೀಸಲಾತಿ ನೀಡಿ, ಇಲ್ಲವೇ ರಾಜೀನಾಮೆ ಕೊಡಿ ಎಂದು ಕೂಗಿದವರು ಈಗ ಎಲ್ಲಿದ್ದಾರೆ? ಈಗ ಏಕೆ ಮಾತನಾಡುತ್ತಿಲ್ಲ?’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರಶ್ನಿಸಿದರು.

ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಧರಣಿಗೆ ಬೆಂಬಲ ಸೂಚಿಸಿ ಅವರು ಸೋಮವಾರ ಮಾತನಾಡಿದರು.

‘ಸಮುದಾಯದ ವಿಚಾರದಲ್ಲಿ ರಾಜಕೀಯ ಮಾಡಬಾರದು. ಮೀಸಲಾತಿಯ ಬೇಡಿಕೆ ಈಡೇರುವವರೆಗೆ ಪಕ್ಷಾತೀತ ಹೋರಾಟಕ್ಕೆ ಸಿದ್ಧ. ಈ ಬಗ್ಗೆ ಶ್ರೀಗಳು ಕೈಗೊಳ್ಳುವ ನಿರ್ಧಾರಕ್ಕೂ ಬದ್ಧ’ ಎಂದು ಹೇಳಿದರು.

ADVERTISEMENT

‘ಶ್ರೀಗಳು ಕೈಗೊಂಡಿರುವ ಧರಣಿ ಸತ್ಯಾಗ್ರಹ ನ್ಯಾಯಯುತವಾಗಿದೆ. ಸಮುದಾಯದ ಬೇಡಿಕೆ ಈಡೇರಿಸಬೇಕು ಎನ್ನುವ ಉದ್ದೇಶದಿಂದ ಸಮ್ಮಿಶ್ರ ಸರ್ಕಾರ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್ ದಾಸ್ ಆಯೋಗ ರಚಿಸಿತ್ತು. ನಾಗಮೋಹನ್ ದಾಸ್ ಅವರು ಸಮಗ್ರವಾಗಿ ಅಧ್ಯಯನ ನಡೆಸಿ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದ್ದಾರೆ. ಆದರೂ, ಸರ್ಕಾರ ಮೀಸಲಾತಿ ಹೆಚ್ಚಿಸಲು ವಿಳಂಬ ಮಾಡುತ್ತಿದೆ. ವಿಳಂಬದ ಬಗ್ಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೇವೆ’ ಎಂದು ವಿವರಿಸಿದರು.

‘ಬೇಡಿಕೆ ಈಡೇರಬೇಕಾದರೆ ಸರ್ಕಾರ, ಮುಖ್ಯಮಂತ್ರಿ ಹಾಗೂ ಸಮುದಾಯದ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಬಿ. ಶ್ರೀರಾಮುಲು ಅವರು ಶ್ರೀಗಳ ಜೊತೆ ಹಲವು ವಿಷಯಗಳ ಕುರಿತು ಚರ್ಚಿಸಿದರು.

‘ಮೀಸಲಾತಿ ಕುರಿತು ಮುಖ್ಯಮಂತ್ರಿ ಅವರ ಜತೆ ಚರ್ಚಿಸಲಾಗುವುದು’ ಎಂದು ತಿಳಿಸಿ ಅಲ್ಲಿಂದ ಹೊರಟರು.

ಶಾಸಕರಾದ ಟಿ.ರಘುಮೂರ್ತಿ, ಈ. ತುಕಾರಾಂ, ಬಿ. ನಾಗೇಂದ್ರ, ಬಸವನಗೌಡ ತುರವೀಹಾಳ ಅವರು ಧರಣಿಗೆ ಬೆಂಬಲ ಸೂಚಿಸಿ, ಶ್ರೀಗಳು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.