ADVERTISEMENT

ನಾಡಗೀತೆಯ ಧಾಟಿ ನಿರ್ಣಯ ಆಗಿಲ್ಲ: ಸಚಿವ ವಿ.ಸುನಿಲ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 19:54 IST
Last Updated 22 ಅಕ್ಟೋಬರ್ 2021, 19:54 IST

ಬೆಂಗಳೂರು: ‘ನಾಡಗೀತೆಗೆ ಯಾವ ರಾಗ ಸಂಯೋಜನೆಯ ಧಾಟಿಯನ್ನು ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದು ಕೊಂಡಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಸ್ಪಷ್ಟಪಡಿಸಿದರು.

ಈ ಸಂಬಂಧ ಯಾವುದೇ ಸುತ್ತೋಲೆಯನ್ನೂ ಹೊರಡಿಸಿಲ್ಲ. ಯಾರಾದರೂ ನಿರ್ದಿಷ್ಟವಾದ ರಾಗ ಸಂಯೋಜನೆಯಲ್ಲೇ ನಾಡಗೀತೆ ಹಾಡ ಬೇಕು ಎಂದು ಪ್ರಚಾರ ಮಾಡುತ್ತಿದ್ದರೆ, ಅದನ್ನು ನಂಬಬಾರದು ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು.

ಸರ್ಕಾರ ರಚಿಸಿದ್ದ ಸಮಿತಿ ಈಗಾಗಲೇ ವರದಿ ನೀಡಿದ್ದು, ಅದನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದೇವೆ. ಚುನಾವಣೆ ಮುಗಿದ ನಂತರ ಅವರು ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದೂ ತಿಳಿಸಿದರು.

ADVERTISEMENT

ಅ.28ರಂದು ಸರ್ಕಾರ ಹಮ್ಮಿ ಕೊಂಡಿರುವ ಕನ್ನಡ ಗೀತೆ ಗಾಯನದಲ್ಲಿ ಅಧಿಕೃತವಾಗಿಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ನಿಸಾರ್‌ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’, ಡಾ.ರಾಜ್‌ ಹಾಡಿರುವ ‘ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟ ಬೇಕು’ ಹಾಡಬೇಕು. ಈ ಕಾರ್ಯಕ್ರಮ ಕ್ಕಾಗಿ ಒಂದು ವೇಳೆ ನಾಡಗೀತೆ ಹಾಡುವ ಹಾಗಿದ್ದರೆ, ಯಾವುದೇ ಧಾಟಿಯಲ್ಲೂ ಹಾಡಬಹುದು. ನಿರ್ದಿಷ್ಟ ಧಾಟಿಯಲ್ಲಿ ಹಾಡಬೇಕು ಎಂದು ಒತ್ತಡ ಹೇರು ವಂತಿಲ್ಲ. ಆದರೆ, ನಾಡಗೀತೆ ಬಗ್ಗೆ ಮುಖ್ಯಮಂತ್ರಿ ಅವರು ಅಂತಿಮ ತೀರ್ಮಾನ ತೆಗೆದುಕೊಂಡ ಮೇಲೆ ಅದೇ ಧಾಟಿಯಲ್ಲಿ ಹಾಡಬೇಕಾಗುತ್ತದೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

‘ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜಿಸಿರುವ ಧಾಟಿಯನ್ನೇ ನಾಡಗೀತೆಗೆ ಅಳವಡಿಸಿಕೊಳ್ಳಲು ತಜ್ಞರ ಸಮಿತಿ ಈಗಾಗಲೇ ಶಿಫಾರಸ್ಸು ಮಾಡಿದೆ. ಆದರೆ, ಇದನ್ನು ವಿರೋಧಿಸುತ್ತಿರುವ ಗುಂಪು ಸಿ.ಅಶ್ವತ್ಥ್ ಸಂಯೋಜಿಸಿರುವ ಧಾಟಿಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ವಿವಿಧ ಶಾಲೆಗಳಿಗೆ ತಿಳಿಸಿ, ಅದೇ ಪ್ರಕಾರ ರಾಗ ಸಂಯೋಜಿಸಬೇಕು ಎಂಬ ಒತ್ತಡ ಹೇರುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.