ADVERTISEMENT

ಕಳ್ಳತನವನ್ನು ಅಮರಿಕದಿಂದಲೇ ತಡೆದ ಮಾಲೀಕ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 20:19 IST
Last Updated 15 ಜೂನ್ 2019, 20:19 IST

ಬೆಂಗಳೂರು: ನಾಗವಾರ ಬಳಿಯ ಮಾನ್ಯತಾ ಟೆಕ್‌ಪಾರ್ಕ್ ಸಮೀಪದ ಮನೆಯೊಂದರಲ್ಲಿ ಶನಿವಾರ ನಸುಕಿನಲ್ಲಿ ನಡೆಯಲಿದ್ದ ಕಳ್ಳತನವನ್ನು ಅಮೆರಿಕದಿಂದಲೇ ಮನೆ ಮಾಲೀಕರು ತಡೆದಿದ್ದಾರೆ.

ನಗರದ ನಿವಾಸಿಯಾದ ಪಾರ್ಥಸಾರಥಿ ಅಮೆರಿಕದಲ್ಲಿ ನೆಲೆಸಿದ್ದಾರೆ. ನಗರದಲ್ಲಿರುವ ಮನೆಗೆ ಸುರಕ್ಷತಾ ಉಪಕರಣಗಳನ್ನು ಅಳವಡಿಸಿದ್ದಾರೆ. ಅದರ ಸಹಾಯದಿಂದಲೇ ಕಳ್ಳತನವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

‘ಕಳ್ಳರಿಬ್ಬರು ಮನೆಗೆ ನುಗ್ಗಿದ್ದರು. ಕೂಡಲೇ ಪಾರ್ಥಸಾರಥಿ ಅವರ ಮೊಬೈಲ್‌ಗೆ ಸಂದೇಶ ಹೋಗಿತ್ತು. ಎಚ್ಚೆತ್ತ ಅವರು, ಅಲ್ಲಿಂದಲೇ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ಮೊಬೈಲ್‌ನಲ್ಲಿ ವೀಕ್ಷಿಸಿದ್ದರು. ನಂತರ, ವಾಟ್ಸ್‌ಆ್ಯಪ್‌ನಲ್ಲಿ ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ಪೊಲೀಸರನ್ನು ಕರೆದುಕೊಂಡು ಮನೆ ಬಳಿ ಹೋಗುವಂತೆ ಹೇಳಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಪೊಲೀಸರು ಹಾಗೂ ನಿವಾಸಿಗಳು, ಒಟ್ಟಿಗೆ ಮನೆಯೊಳಗೆ ಹೋಗಿದ್ದರು. ಅವರನ್ನು ನೋಡಿದ ಒಬ್ಬ ಕಳ್ಳ ಓಡಿಹೋದ. ಇನ್ನೊಬ್ಬ ಕಳ್ಳ ಸಿಕ್ಕಿಬಿದ್ದ’ ಎಂದರು.

‘ನೇಪಾಳದಿಂದ ಬಂದಿದ್ದ ಆರೋಪಿಗಳು, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಕಳ್ಳತನ ನಡೆಸಲು ಮುಂದಾಗಿದ್ದರು. ಮನೆ ಮಾಲೀಕರು ಅಳವಡಿಸಿದ್ದ ಸಾಧನಗಳಿಂದ ಒಬ್ಬಾತ ಸಿಕ್ಕಿಬಿದ್ದಿದ್ದಾನೆ. ಇನ್ನೊಬ್ಬನಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.