ಬೆಂಗಳೂರು: ತುಮಕೂರು–ಬೆಂಗಳೂರು ಮೆಟ್ರೊ ಮಾರ್ಗವನ್ನು ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುವುದು. ಸರ್ಕಾರ ಹೂಡಿಕೆ ಮಾಡುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ಬೆಂಗಳೂರು ನಗರದ ಒತ್ತಡ, ಬೆಂಗಳೂರು–ತುಮಕೂರು ರಸ್ತೆ ಮಾರ್ಗದ ವಾಹನ ದಟ್ಟಣೆ ಕಡಿಮೆ ಮಾಡಲು ತುಮಕೂರಿಗೆ ಮೆಟ್ರೊ ಮಾರ್ಗ ವಿಸ್ತರಣೆಯಾಗಬೇಕಿದೆ. ತುಮಕೂರಿನ ಅಭಿವೃದ್ಧಿಯ ದೃಷ್ಟಿಯಿಂದಲೂ ಯೋಜನೆ ಅಗತ್ಯವಿದೆ ಎಂದರು.
ಮುಖ್ಯಮಂತ್ರಿಯವರ ಮನವೊಲಿಸಿ, ಕಳೆದ ಬಜೆಟ್‌ನಲ್ಲಿ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ಹೈದ್ರಾಬಾದ್ ಕಂಪನಿ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿದೆ. ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
‘ತುಮಕೂರು ಮೆಟ್ರೊ ಯೋಜನೆ ಕುರಿತು ಬೆಂಗಳೂರಿನ ಇಬ್ಬರು ಸಂಸದರು ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಕೈಗಾರಿಕಾ ಪ್ರದೇಶವಿದೆ. ರಸ್ತೆ ಮೂಲಕ ತುಮಕೂರಿಗೆ ಹೋಗಲು ಎರಡು ಗಂಟೆ ಆಗುತ್ತಿದೆ. ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಯ್ಕೆ ಮಾಡಿದ ಕೆಲ ಸ್ಥಳಗಳಲ್ಲಿ ನೆಲಮಂಗಲವೂ ಇದೆ. ದಾಬಸ್‌ಪೇಟೆ–ದೊಡ್ಡಬಳ್ಳಾಪುರ ಮಧ್ಯೆ ಕ್ವಿನ್‌ಸಿಟಿ ಬರುತ್ತಿದೆ. ಈ ಎಲ್ಲ ಕಾರಣಗಳಿಂದ ಮೆಟ್ರೊ ಯೋಜನೆಯ ವಿಸ್ತರಣೆ ಆಗಬೇಕಿದೆ’ ಎಂದರು.
‘ಕೇಂದ್ರದ ಸಚಿವ ವಿ. ಸೋಮಣ್ಣ ತುಮಕೂರಿನ ವಿಚಾರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಮೆಟ್ರೊ ಯೋಜನೆಗೆ ಅವರ ಸಹಮತವಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.