ಜಿ. ಪರಮೇಶ್ವರ, ಗೃಹ ಸಚಿವ
ಬೆಂಗಳೂರು: ‘ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಸದ್ಯದ ಸ್ಥಿತಿಯಲ್ಲಿ ಪೊಲೀಸರಿಗೆ ಯಾವುದೇ ರಜೆ ಕೊಡುವುದಿಲ್ಲ. ಸೂಕ್ಷ್ಮ ಸನ್ನಿವೇಶ ಇರುವುದರಿಂದ ಪೊಲೀಸರಿಗೆ ರಜೆ ಮಂಜೂರು ಮಾಡುವುದಕ್ಕೆ ಹೋಗುವುದಿಲ್ಲ’ ಎಂದರು.
‘ರಾಜ್ಯದಲ್ಲಿ ಸುಳ್ಳು ಸುದ್ದಿ ಹೆಚ್ಚಾಗಿ ಹರಡುತ್ತಿರುವ ಕುರಿತಂತೆ ಆಂತರಿಕ ಭದ್ರತಾ ವಿಭಾಗದೊಂದಿಗೆ ಚರ್ಚೆ ನಡೆಸಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿ ಹರಿಹಾಡುತ್ತವೆ. ಹಳೆ ವಿಡಿಯೊಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಪ್ರಚೋದನಾಕಾರಿ ವಿಷಯಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಸುಳ್ಳು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ತಾಂತ್ರಿಕವಾಗಿ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನೂ ಚರ್ಚಿಸಿದ್ದೇವೆ’ ಎಂದರು.
‘ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆ, ಉಗ್ರರ ವಿರುದ್ಧ ಸೇನಾ ಪಡೆ ಕ್ರಮ ತೆಗೆದುಕೊಂಡಿದೆ. ಪರಿಸ್ಥಿತಿ ತಿಳಿಯಾಗಿರುವುದನ್ನು ಕೇಂದ್ರ ಸರ್ಕಾರ ನಮಗೆ ತಿಳಿಸಲಿದೆ. ಅಲ್ಲಿಯವರೆಗೂ ನಾವು ಸೂಕ್ಷ್ಮವಾಗಿರಬೇಕು. ಪ್ರತಿಯೊಂದು ನಗರ, ಪಟ್ಟಣದಲ್ಲಿ ಜಾಗೃತೆ ವಹಿಸಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.