ಕಲಬುರ್ಗಿ:ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ–ಪ್ರೌಢ ಶಾಲೆಗಳಲ್ಲಿ ಸುಮಾರು 1.5 ಕೋಟಿ ವಿದ್ಯಾರ್ಥಿಗಳು ಓದುತ್ತಿದ್ದು, ಆ ಪೈಕಿ 31.27 ಲಕ್ಷ ವಿದ್ಯಾರ್ಥಿಗಳಲ್ಲಿ ಮೊಬೈಲ್ ಇಲ್ಲ. ಇದು ಆನ್‌ಲೈನ್ ಪಾಠಕ್ಕೆ ತೊಡಕಾಗುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ಆರಂಭಿಸಿದ ‘ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್)’ಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಇದರಲ್ಲಿ 93 ಲಕ್ಷ ಮಕ್ಕಳು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಇನ್ನೂ 57 ಲಕ್ಷ ಮಕ್ಕಳು ಹೊರಗುಳಿದಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರ್ಗಿ ವಲಯದ ಹೆಚ್ಚುವರಿ ಆಯುಕ್ತ ನಳಿನ್ ಅತುಲ್, ‘ಪ್ರಸಕ್ತ ವರ್ಷ ಮಕ್ಕಳಿಗೆ ಪಾಠ ಮಾಡಲು ಮೊಬೈಲ್‌ಗಿಂತ ಹೆಚ್ಚಾಗಿ ಟಿವಿಯನ್ನೇ ಸಾಧನವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಶೇ 90ರಷ್ಟು ಮಕ್ಕಳನ್ನು ತಲುಪಲು ಸಾಧ್ಯವಿದೆ’ ಎಂದರು.
‘ಕೋವಿಡ್ ಮೂರನೇ ಅಲೆಯು ಹೆಚ್ಚಾಗಿ ಮಕ್ಕಳ ಮೇಲೆಯೇ ಪರಿಣಾಮ ಬೀರಲಿದೆ ಎಂದು ತಜ್ಞರು ಸೂಚನೆ ನೀಡಿದ್ದಾರೆ. ಹೀಗಾಗಿ, ಮಕ್ಕಳಿಗೆ ಈ ವರ್ಷವೂ ಆನ್‌ಲೈನ್ ಅಥವಾ ದೂರದರ್ಶನದ ಮೂಲಕ ಪಾಠ ಮಾಡುವುದು ಅನಿವಾರ್ಯವಾಗಿದೆ.ಮೊಬೈಲ್ ಹೊರತಾಗಿಯೂ ಚಂದನ ವಾಹಿನಿ, ಯೂ ಟ್ಯೂಬ್, ರೆಡಿಯೊ ಮಾಧ್ಯಗಳಲ್ಲೂ ಪ್ರತಿ ದಿನ ಪಾಠ ಕೇಳಬಹುದು. ಕಳೆದ ವರ್ಷ ಇದೇ ರೀತಿ ಶೇ 90ರಷ್ಟು ಮಕ್ಕಳು ಪಾಠ ಆಲಿಸಿದ್ದಾರೆ. ಇದರೊಂದಿಗೆ ಮೂರನೇ ಅಲೆ ನಿಂತ ಮೇಲೆ ‘ವಠಾರ ಶಾಲೆ’ಗಳನ್ನೂ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದರು.
‘ಹಳ್ಳಿಗಳಲ್ಲಿ ಮೊಬೈಲ್ ಇಲ್ಲದ ಮಕ್ಕಳ ಅನುಕೂಲಕ್ಕಾಗಿ ಸಮುದಾಯ ಸಹಭಾಗಿತ್ವ ಪಡೆಯಲಾಗುತ್ತಿದೆ. ಆಯಾ ಊರಿನ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪಾಲಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ತಂಡ ರಚಿಸಿ, ಮಕ್ಕಳ ಮನೆಗೆ ಹತ್ತಿರ ಇರುವವರು ಮೊಬೈಲ್ ಹೊಂದಿದ್ದರೆ ಅವರ ಸಂಪರ್ಕ ಇಟ್ಟುಕೊಳ್ಳಲಾಗುವುದು. ಅವರ ಮೂಲಕ ಮಕ್ಕಳಿಗೆ ಪಾಠ ಮುಟ್ಟಿಸಲಾಗುವುದು. ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕೆಲವೆಡೆ ಈಗಾಗಲೇ ಇದನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದೇವೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.