ADVERTISEMENT

ಕೊರೊನಾ ಆತಂಕದ ಹಿನ್ನೆಲೆ: ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಆಚರಣೆ ಇಲ್ಲ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 5:44 IST
Last Updated 16 ಜೂನ್ 2020, 5:44 IST
ಚಾಮುಂಡಿ ಬೆಟ್ಟದಲ್ಲಿರುವ ದೇವಸ್ಥಾನ
ಚಾಮುಂಡಿ ಬೆಟ್ಟದಲ್ಲಿರುವ ದೇವಸ್ಥಾನ   

ಮೈಸೂರು:ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಶುಕ್ರವಾರ ಆಚರಣೆ ಮಾಡದಿರಲು ನಿರ್ಧರಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಮಂಗಳವಾರ ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

ಆಷಾಢ ಶುಕ್ರವಾರ ಆಚರಣೆ ಮಾಡಿದರೆ ಸಾವಿರಾರು ಭಕ್ತರು ಬರುವ ಸಾಧ್ಯತೆಯಿದೆ. ಇದರಿಂದ ಈ ಬಾರಿ ಕೈಬಿಡುವುದೇ ಸೂಕ್ತ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸಲಹೆ ನೀಡಿತು.‌ ದೇವಸ್ಥಾನದ ಆಡಳಿತ ಮಂಡಳಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಸಚಿವರು ಆಚರಣೆ ಕೈಬಿಡಲು ನಿರ್ಧರಿಸಿದರು.

ADVERTISEMENT

ಆಷಾಢ ಶುಕ್ರವಾರಗಳಂದು ಧಾರ್ಮಿಕ ವಿಧಿ ವಿಧಾನ ಎಂದಿನಂತೆ ನಡೆಯಲಿದೆ. ಸಾರ್ವಜನಿಕರಿಗೆ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಆಷಾಢ ಮಾಸದಲ್ಲಿ ಶುಕ್ರವಾರ ಮಾತ್ರವಲ್ಲದೆ, ಶನಿವಾರ ಮತ್ತು ಭಾನುವಾರ ಕೂಡಾ ಸಾರ್ವಜನಿಕರಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂದು ಸಚಿವರು ಹೇಳಿದರು.

ಪ್ರತಿವರ್ಷ ಆಷಾಢ ಮಾಸದ ಎಲ್ಲ ಶುಕ್ರವಾರ ಚಾಮುಂಡಿ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ನಾಡಿನ ವಿವಿಧ ಭಾಗಗಳ ಲಕ್ಷಾಂತರ ಮಂದಿ ಈ ಅವಧಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.