ಡಾ. ಅಂಬೇಡ್ಕರ್
ಬೆಂಗಳೂರು: ‘ರಾಜ್ಯದಲ್ಲಿರುವ ಎಲ್ಲ ಗುಡಿ, ಚರ್ಚ್, ಮಸೀದಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು’ ಎಂದು ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ, ಸರ್ಕಾರವನ್ನು ಆಗ್ರಹಿಸಿದ್ದಾರೆ.
‘ಅಂಬೇಡ್ಕರ್ ನೀಡಿರುವ ಸಂವಿಧಾನದ ಪ್ರಕಾರವೇ ನ್ಯಾಯಾಲಯಗಳು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತವೆ. ನ್ಯಾಯಾಧೀಶರೆಲ್ಲರೂ ಸಂವಿಧಾನ ಓದುತ್ತಾರೆ. ಆದರೆ ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸದೇ ಇರುವುದು ದುರದೃಷ್ಟಕರ. ಹೈಕೋರ್ಟ್ ಆದೇಶದ ಮೂಲಕ ಇನ್ನು ಮುಂದಾದರೂ ನ್ಯಾಯಾಂಗ ವ್ಯವಸ್ಥೆಯ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಬೇಕು’ ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
‘ಗುಡಿಗಳಲ್ಲಿ ಭಗವದ್ಗೀತೆ ಇರುವ ಹಾಗೆ ಸಂವಿಧಾನದ ಪ್ರತಿಯೂ ಇರಬೇಕು. ಅರ್ಚಕರು ಪೂಜೆ ಆರಂಭಿಸುವ ಮೊದಲು ಸಂವಿಧಾನದ ಮುನ್ನುಡಿ ಓದಬೇಕು. ಅದೇ ರೀತಿ ಚರ್ಚ್‌ಗಳಲ್ಲಿ ಫಾದರ್‌ಗಳು ಬೈಬಲ್ ಓದುವುದಕ್ಕೆ ಮುನ್ನ ಸಂವಿಧಾನ ಓದಬೇಕು. ಮಸೀದಿಗಳಲ್ಲಿ ಮುಲ್ಲಾ, ಮೌಲ್ವಿಗಳು ಕುರಾನ್ ಪಠಣ ಮಾಡುವುದಕ್ಕೆ ಮುನ್ನ ಸಂವಿಧಾನ ಪಠಣ ಮಾಡಬೇಕು. ಜೈನ ಬಸದಿ, ಗುರುದ್ವಾರಗಳಲ್ಲೂ ಸಂವಿಧಾನದ ಮುನ್ನುಡಿ ಓದಿ ಧಾರ್ಮಿಕ ಆಚರಣೆ ಆರಂಭಿಸುವುದು ಕಡ್ಡಾಯವಾಗಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ರಾಜ್ಯ ಸರ್ಕಾರವೇ ಸಂವಿಧಾನದ ಪ್ರತಿಗಳನ್ನು ದೇವಾಲಯ, ಚರ್ಚ್, ಮಸೀದಿ, ಬಸದಿ, ಗುರುದ್ವಾರಗಳಿಗೆ ಉಚಿತವಾಗಿ ಪೂರೈಕೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಬಿಜೆಪಿಯವರ ಮನೋಭಾವ ಯಾವಾಗಲೂ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ವಿರೋಧಿಯಾಗಿರುತ್ತದೆ. ದೇಶದಾದ್ಯಂತ ಮನುವಾದವನ್ನು ಹಬ್ಬಿಸುವುದು ಬಿಜೆಪಿಯವರ ಉದ್ದೇಶವಾಗಿದೆ. ಅಹಿಂದ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರು ಸದಾ ಎಚ್ಚರಿಕೆಯಿಂದ ಇರಬೇಕು. ಅಂಬೇಡ್ಕರ್ ವಾದದ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಬೇಕು. ಸಂವಿಧಾನವನ್ನು ಅಭ್ಯಾಸ ಮಾಡಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.