ADVERTISEMENT

ಪಾಠದ ಜತೆಗೇ ಮಕ್ಕಳ ಹಸಿವು ನೀಗಿಸುವ ಕಾರ್ಯ: ಯಲ್ಲಾಪುರದಲ್ಲಿ ಅಪರೂಪದ ಶಿಕ್ಷಕ

ಯಲ್ಲಾಪುರದ ಮಾಸ್ತರರಿಂದ ವಿದ್ಯಾರ್ಥಿಗಳಿಗೆ ನಿತ್ಯವೂ ಬಾಳೆಹಣ್ಣು ಹಂಚಿಕೆ

ನಾಗರಾಜ ಮದ್ಗುಣಿ
Published 30 ಆಗಸ್ಟ್ 2020, 19:30 IST
Last Updated 30 ಆಗಸ್ಟ್ 2020, 19:30 IST
ಯಲ್ಲಾಪುರದಲ್ಲಿ ಶಿಕ್ಷಕ ರಾಮಚಂದ್ರ ನಾಯ್ಕ ಮಕ್ಕಳ ಮನೆಯ ಬಳಿ ತೆರಳಿ ಬಾಳೆಹಣ್ಣು ವಿತರಿಸುತ್ತಿರುವುದು
ಯಲ್ಲಾಪುರದಲ್ಲಿ ಶಿಕ್ಷಕ ರಾಮಚಂದ್ರ ನಾಯ್ಕ ಮಕ್ಕಳ ಮನೆಯ ಬಳಿ ತೆರಳಿ ಬಾಳೆಹಣ್ಣು ವಿತರಿಸುತ್ತಿರುವುದು   

ಯಲ್ಲಾಪುರ (ಉತ್ತರ ಕನ್ನಡ): ಪಟ್ಟಣದ ಗಣಪತಿ ಗಲ್ಲಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮಚಂದ್ರ ಐ.ನಾಯ್ಕ, ಶಾಲೆಗಳು ತೆರೆಯದ ಲಾಕ್‌ಡೌನ್ ಅವಧಿಯಲ್ಲೂ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಹಂಚುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಕೊರತೆ ಆಗಬಾರದು ಎಂದು ಅವರು ವಿದ್ಯಾರ್ಥಿಗಳ ಮನೆಗೇ ತೆರಳಿ ಈ ಕಾರ್ಯ ಮಾಡುತ್ತಿದ್ದಾರೆ.

ರಾಮಚಂದ್ರ ಅವರು ಒಂದು ವರ್ಷದಿಂದ ತಮ್ಮ ವೇತನದಿಂದಲೇ ಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ತರಗತಿಗಳು ನಡೆಯದಿದ್ದರೂ ತಮ್ಮ ಕಾರ್ಯವನ್ನು ನಿಲ್ಲಿಸಲಿಲ್ಲ. ಈಗ ಪ್ರತಿದಿನ ದ್ವಿಚಕ್ರ ವಾಹನದಲ್ಲಿ ತಮ್ಮ ಹಾಗೂ ಇತರ ಶಾಲೆಗಳ ಸುಮಾರು 50 ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡುತ್ತಿದ್ದಾರೆ.

‘ಗಣಪತಿ ಗಲ್ಲಿಯ ಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಕಡು ಬಡವರು. ಶಾಲೆಯಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ಕೆಲವರು ಪಾಠದಲ್ಲಿ ಗಮನ ನೀಡದೇ ಹಸಿವಿನಿಂದ ಹೊಟ್ಟೆ ಕಿವುಚಿಕೊಂಡಿದ್ದನ್ನು ಗಮನಿಸಿದ್ದೆ. ಅವರು ಬೆಳಿಗ್ಗೆ ತಿಂಡಿ ತಿನ್ನದೇ ಬರುತ್ತಿರುವ ಸಂಗತಿ ಗೊತ್ತಾಯಿತು. ಪಾಲಕರ ಸಭೆ ನಡೆಸಿ ಮಕ್ಕಳಿಗೆ ಬೆಳಗಿನ ಉಪಾಹಾರದ ಅಗತ್ಯದ ಬಗ್ಗೆ ತಿಳಿಸಿದೆ. ಆದರೆ, ಪ್ರಯೋಜನವಾಗದ ಕಾರಣ ನಾನೇ ಉಪಾಹಾರ ಕೊಡಲು ನಿರ್ಧರಿಸಿದೆ’ ಎನ್ನುತ್ತಾರೆ ಅವರು.

ADVERTISEMENT

‘ಬಾಳೆಹಣ್ಣು ಹಸಿವನ್ನು ನೀಗಿಸಲು ಹಾಗೂ ಅಧಿಕ ಪೌಷ್ಟಿಕಾಂಶ ಪೂರೈಕೆಗೆ ಸಹಕಾರಿಯಾಗಿದೆ. ಹೀಗಾಗಿ ಅದನ್ನೇ ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ರಾಮಚಂದ್ರ.

ಅಡುಗೆ ಸಿಬ್ಬಂದಿಯ ಸಹಾಯ ಪಡೆದು, ಮಕ್ಕಳಿಗೆ ಸರ್ಕಾರ ನೀಡುವ ಹಾಲಿನ ಜೊತೆ ‘ಸಂಗಮ ದಾಸೋಹ’ ಯೋಜನೆಯನ್ನು ನಿರಂತರ ಏಳು ತಿಂಗಳು ಆಯೋಜಿಸಿದರು. ಉಪ್ಪಿಟ್ಟು, ಅವಲಕ್ಕಿ, ಪುಳಿಯೋಗರೆ, ಸಿರಿಧಾನ್ಯದ ಪುಲಾವು ನೀಡಿದರು. ಇದರ ಪ್ರಯೋಜನ ಪಡೆಯುವ ಮಕ್ಕಳ ಸಂಖ್ಯೆಯೂ ಅಧಿಕವಾಯಿತು. ಪಕ್ಕದ ಅಂಗನವಾಡಿ ಪುಟಾಣಿಗಳೂ ಬಂದು ಆಹಾರ ಸೇವಿಸಿದರು. ಆಗಾಗ ಬೇರೆ ಬೇರೆ ಶಾಲೆಗಳಿಗೂ ತೆರಳಿ ಅಲ್ಲಿನ ಮಕ್ಕಳಿಗೂ ಬಾಳೆಹಣ್ಣುಗಳನ್ನು ವಿತರಿಸಿದರು.

ಹಾಸನದಲ್ಲೂ ಹಂಚಿಕೆ

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮುತುಗನ್ನೆ ಹಳ್ಳಿಯ ಶಾಲೆಯಲ್ಲಿ ರಾಮಚಂದ್ರ ವೃತ್ತಿ ಆರಂಭಿಸಿದ್ದರು. ಈಗ ಆ ಶಾಲೆಯ ಅಭಿವೃದ್ಧಿ ಸಮಿತಿಗೆ ರಾಮಚಂದ್ರ ಅವರ ವಿದ್ಯಾರ್ಥಿಯೇ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಅವರ ಮೂಲಕ ಅಲ್ಲಿನ ವಿದ್ಯಾರ್ಥಿಗಳಿಗೂ ಪ್ರತಿ ಗುರುವಾರ ಮಧ್ಯಾಹ್ನದ ಬಿಸಿ ಊಟದ ನಂತರ ಬಾಳೆಹಣ್ಣು ನೀಡುತ್ತಿದ್ದರು. ಈ ಬಾರಿ ಶಾಲೆ ಆರಂಭವಾದ ನಂತರ ಮತ್ತೆ ಆರಂಭಿಸುವ ಇಚ್ಛೆ ಹೊಂದಿದ್ದಾರೆ.

***

ಬಡ ಮಕ್ಕಳಿಗೆ ಶಿಕ್ಷಣದ ಮೊದಲು ಹಸಿವನ್ನು ನೀಗಿಸುವ ಕಾರ್ಯ ಮಾಡಿದ್ದು ಫಲ ನೀಡಿತು. ಅವರು ಓದಿನ ಕಡೆ ಗಮನಹರಿಸಿದರು. ಕಲಿಕೆಯ ಗುಣಮಟ್ಟವೂ ಹೆಚ್ಚಿತು.

– ರಾಮಚಂದ್ರ ಐ.ನಾಯ್ಕ, ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.