ADVERTISEMENT

ಶಾಸಕರ ಅವಹೇಳನ, ಬೆದರಿಕೆ: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 19:31 IST
Last Updated 18 ಮಾರ್ಚ್ 2021, 19:31 IST
ಬಸವರಾಜ ಬೊಮ್ಮಾಯಿ-ಸಾಂದರ್ಭಿಕ ಚಿತ್ರ
ಬಸವರಾಜ ಬೊಮ್ಮಾಯಿ-ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಾಸಕರನ್ನು ಅವಹೇಳನ ಮಾಡಿರುವುದು ಮತ್ತು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರಿಗೆ ಬೆದರಿಕೆ ಒಡ್ಡಿರುವ ಆರೋಪ ಎದುರಿಸುತ್ತಿರುವ ಸಹಕಾರ ಇಲಾಖೆಯ ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ಗುರುವಾರ ತಿಳಿಸಿದರು.

ಸಹಕಾರ ಸಂಘಗಳ ಸಹಾಯಕ ರಿಜಿಸ್ಟ್ರಾರ್‌ ನಾರಾಯಣ್‌ ಮತ್ತು ಸಹಾಯಕ ಸಹಕಾರ ಅಭಿವೃದ್ಧಿ ಅಧಿಕಾರಿ ವಿ. ಸುನೀಲ್‌ ವಿರುದ್ಧ ಜೆಡಿಎಸ್‌ ಸದಸ್ಯರು ಸದನದಲ್ಲಿ ಆರೋಪ ಮಾಡಿದ್ದರು. ನಾರಾಯಣ್‌ ಅವರು ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು ಎನ್ನಲಾದ ರೆಕಾರ್ಡಿಂಗ್‌ ಇರುವ ಸಿ.ಡಿಯನ್ನೂ ಸಲ್ಲಿಸಿದ್ದರು.

ಈ ಕುರಿತು ಗುರುವಾರ ಉತ್ತರ ನೀಡಿದ ಗೃಹ ಸಚಿವರು, ‘ಶಾಸಕರು ನೀಡಿರುವ ಎಲ್ಲ ದಾಖಲೆಗಳನ್ನೂ ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕಳುಹಿಸಿ, ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರಿಗೆ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದರು.

ADVERTISEMENT

ಸಿ.ಡಿಯಲ್ಲಿರುವ ರೆಕಾರ್ಡಿಂಗ್‌ನಲ್ಲಿನ ಧ್ವನಿ ಮಾದರಿ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಇಬ್ಬರೂ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಹಾಗೂ ಹೆಚ್ಚುವರಿಯಾಗಿ ನೀಡಿರುವ ಪ್ರಭಾರಗಳನ್ನು ರದ್ದುಪ‍ಡಿಸುವಂತೆ ಜೆಡಿಎಸ್‌ ಸದಸ್ಯರು ಒತ್ತಾಯಿಸಿದರು. ಈ ಕುರಿತು ಸಹಕಾರ ಸಚಿವರಿಂದ ಉತ್ತರ ಕೊಡಿಸುವುದಾಗಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.