ADVERTISEMENT

ಖಲಿಸ್ತಾನ್ ಹಿಂಸೆಯ ಸಂಚು ವಿಫಲಗೊಳಿಸಲು ಕಾಯ್ದೆ ವಾಪಸ್‌: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 16:40 IST
Last Updated 23 ನವೆಂಬರ್ 2021, 16:40 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ‘ಖಲಿಸ್ತಾನ್‌ ಉಗ್ರಗಾಮಿ ಸಂಘಟನೆಯು ರೈತರ ಹೋರಾಟವನ್ನು ಮುಂದಿಟ್ಟುಕೊಂಡು ರಾಷ್ಟ್ರದಾದ್ಯಂತ ಹಿಂಸಾಚಾರ ನಡೆಸಲು ಸಂಚು ನಡೆಸಿತ್ತು. ಅದನ್ನು ವಿಫಲಗೊಳಿಸುವುದಕ್ಕಾಗಿಯೇ ಕೃಷಿ ಸಂಬಂಧಿ ಮೂರು ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ರೈತರ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ನಗರ ನಕ್ಸಲರು ಸೇರಿಕೊಂಡಿದ್ದಾರೆ. ಏನೋ ಸಂಚು ನಡೆಯುತ್ತಿದೆ ಎಂಬ ಅನುಮಾನ ಮೊದಲಿನಿಂದಲೂ ಇತ್ತು. ದೆಹಲಿಯ ಕೆಂಪು ಕೋಟೆಯ ಮೇಲೆ ಖಲಿಸ್ತಾನ್‌ ಬಾವುಟ ಹಾರಿಸಿದ್ದ ವ್ಯಕ್ತಿಗೆ ಬಹುಮಾನ ಘೋಷಿಸಿದ್ದು ಅದಕ್ಕೆ ಸಾಕ್ಷ್ಯ ಒದಗಿಸಿತ್ತು’ ಎಂದರು.

ಚುನಾವಣೆಯಲ್ಲಿ ಸೋಲಿನ ಭಯದಿಂದ ಕಾಯ್ದೆಗಳನ್ನು ಹಿಂಪಡೆದಿಲ್ಲ. ಕೃಷಿ ಸಂಬಂಧಿ ಕಾಯ್ದೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ತಾತ್ಕಾಲಿಕ ಹಿನ್ನಡೆ ಆಗಿರಬಹುದು. ಮುಂದೆ ಮತ್ತಷ್ಟು ಸುಧಾರಿತ ಕಾಯ್ದೆಗಳನ್ನು ಸರ್ಕಾರ ತರಲಿದೆ ಎಂದು ಹೇಳಿದರು.

ADVERTISEMENT

ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ ಬಳಿಕವೂ ಪ್ರತಿಭಟನೆ ಮುಂದುವರಿಸಲಾಗಿದೆ. ರೈತರನ್ನು ಮೀರಿದ ಹಿತಾಸಕ್ತಿ ಪ್ರತಿಭಟನೆಯ ಹಿಂದಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ದೂರಿದರು.

‘ಪೌರತ್ವ ತಿದ್ದುಪಡಿ ಕಾಯ್ದೆ’ (ಸಿಎಎ) ರದ್ದುಗೊಳಿಸದಿದ್ದರೆ ಶಾಹೀನ್‌ ಬಾಗ್‌ ಮಾದರಿ ರಕ್ತಪಾತ ನಡೆಯಲಿದೆ’ ಎಂಬ ಎಐಎಂಎಎಂ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿಕೆಗೆ ಅವರು, ‘ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದವರು ರಕ್ತಪಾತದ ಕುರಿತು ಮಾತನಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.