ADVERTISEMENT

ಪತಿ, ಸಹೋದರರಿಂದ ಜೀವ ಬೆದರಿಕೆ: ದೂರು

ಸಹೋದರರ ರಾಜಕೀಯ ಕುಮ್ಮಕ್ಕಿನಿಂದ ಪತಿ ಕಿರುಕುಳ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 19:11 IST
Last Updated 19 ಮಾರ್ಚ್ 2019, 19:11 IST

ಚಿಕ್ಕಮಗಳೂರು: ಪತಿ ಕುಶಾಲ್‌ಗೌಡ, ಅವರ ಸಹೋದರರಾದ ವಿಧಾನ ಪರಿಷತ್ತಿನ ಉಪಸಭಾಪತಿ ಎಸ್‌.ಎಲ್. ಧರ್ಮೇಗೌಡ, ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರಿಂದ ಜೀವ ಬೆದರಿಕೆ ಇದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಖರಾಯಪಟ್ಟಣ ವಾಸಿ ಕುಶಾಲ್‌ಗೌಡ ಪತ್ನಿ ಎನ್‌.ಕೆ.ಗ್ರೀಮಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ನೀಡಿದ್ದಾರೆ.

‘ಅನೈತಿಕ ಸಂಬಂಧದ ಆರೋಪ ಹೊರಿಸಿ ದೈಹಿಕವಾಗಿ, ಮಾನಸಿಕವಾಗಿ ಪತಿ ಹಿಂಸೆ ನೀಡಿದ್ದಾರೆ. ಪತಿ ಮನೆಯಲ್ಲಿ ಇರುವುದು ಕಡಿಮೆ. ತಿಂಗಳಿಗೊಮ್ಮೆ ಮನೆಗೆ ಬಂದು ಬಟ್ಟೆ, ಹಣ ಒಯ್ಯುತ್ತಾರೆ. ಪತಿ ಅನುಮಾನ ಮತ್ತು ಕೋಪಿಷ್ಠ ಸ್ವಭಾವದವರು. ಮಕ್ಕಳ ಭವಿಷ್ಯಕ್ಕಾಗಿ ಈ ವರ್ತನೆಗಳನ್ನು ಸಹಿಸಿಕೊಂಡಿದ್ದೆ. ಪತ್ನಿ, ಮಕ್ಕಳ ಬಗ್ಗೆ ಪತಿಗೆ ಸ್ವಲ್ಪವೂ ಕಾಳಜಿಯೇ ಇಲ್ಲ’ ಎಂದು ಗ್ರೀಮಿ ದೂರಿದ್ದಾರೆ.

‘ಗಣೇಶ್‌ ಗೌಡ ಎಂಬುವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೇನೆ ಎಂದು ಪತಿಗೆ ಗುಮಾನಿ ಇದೆ. ಗಣೇಶಗೌಡ ನಮ್ಮ ಹಿತೈಷಿ. ನಮ್ಮಿಬ್ಬರದು ಸಹೋದರ–ಸಹೋದರಿ ಸಂಬಂಧ ಎಂದು ಹೇಳಿದರೂ ಅರ್ಥಮಾಡಿಕೊಳ್ಳದೆ ಪತಿ ಹಲ್ಲೆ ಮಾಡಿದ್ದಾರೆ. ಫೆ.22ರಂದು ಗಣೇಶ್‌ ಅವರನ್ನು ಪೊಲೀಸರು ಸಖರಾಯಪಟ್ಟಣ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ಪತಿಗೆ ಸಹೋದರರ ರಾಜಕೀಯ ಪ್ರಭಾವದ ಕುಮ್ಮಕ್ಕು ಇದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘1986ರ ಜೂನ್‌ 24ರಂದು ಮಂತ್ರಾಲಯದಲ್ಲಿ ಕುಶಾಲ್‌ ಗೌಡ ಮತ್ತು ನಾನು ಮದುವೆಯಾಗಿದ್ದೆವು. ನಮ್ಮದು ಪ್ರೇಮ ವಿವಾಹ. ಮೂವರು ಮಕ್ಕಳಿದ್ದಾರೆ. ಮದುವೆಗೆ ಪತಿ ಕುಟುಂಬದವರ ವಿರೋಧ ಇತ್ತು. ಮದುವೆಯಾದ ಹೊಸತರಲ್ಲಿ ಪತಿ ಚೆನ್ನಾಗಿ ನೋಡಿ
ಕೊಂಡರು. ನಂತರ ಕಿರುಕುಳ ಶುರುವಾಯಿತು. ನನ್ನ ಜೀವಕ್ಕೆ ಕುತ್ತು ಉಂಟಾದರೆ ಅದಕ್ಕೆ ಪತಿ, ಅವರ ಇಬ್ಬರು ಸಹೋದರರೇ ಹೊಣೆ. ನನಗೆ ರಕ್ಷಣೆ ನೀಡಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

‘ಸಂಬಂಧಪಟ್ಟ ಠಾಣೆಗೆ ದೂರನ್ನು ವರ್ಗಾಯಿಸಲಾಗುವುದು. ವಿಚಾರಣೆ ನಡೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.