ADVERTISEMENT

‘ಕಾಫಿ ನಾಡಿ’ಗೂ ಕಾಲಿಟ್ಟ ಡ್ರಗ್ಸ್‌ ದಂಧೆ: ಮೂವರ ಬಂಧನ

ಉಳಿದವರ ಬಂಧನಕ್ಕೆ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 12:05 IST
Last Updated 29 ಆಗಸ್ಟ್ 2020, 12:05 IST
ಕ್ಷಮಾ ಮಿಶ್ರಾ
ಕ್ಷಮಾ ಮಿಶ್ರಾ   

ಮಡಿಕೇರಿ: ಮಾದಕ ವಸ್ತು ಜಾಲವು ಕಾಫಿ ನಾಡು ಕೊಡಗು ಜಿಲ್ಲೆಗೂ ವ್ಯಾಪಿಸಿದ್ದು, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಜಿಲ್ಲೆಯ ಅಯ್ಯಂಗೇರಿ ಗ್ರಾಮದ ಮಜೀದ್‌ (35), ಅದೇ ಗ್ರಾಮದ ಶಿಯಾಬುದ್ದೀನ್‌ (32) ಹಾಗೂ ಬೆಂಗಳೂರು ಶಿವಾಜಿನಗರದ ಮುಜಾಮಿಲ್‌ (31) ಬಂಧಿತರು.

ಬಂಧಿತರಿಂದ ಟಾಟಾ ಇಂಡಿಕಾ ಕಾರು, 300 ಗ್ರಾಂನಷ್ಟು ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.

ADVERTISEMENT

ಐವರು ಪರಾರಿ: ಗ್ರಾಮಾಂತರ ಪೊಲೀಸ್‌ ಠಾಣೆಯ ‍ಪಿಎಸ್‌ಐ ನೇತೃತ್ವದ ತಂಡವು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಟಾಟಾ ಇಂಡಿಕಾ ಹಾಗೂ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಇದ್ದವರು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಸ್ವಿಫ್ಟ್‌ನಲ್ಲಿದ್ದ ಐವರು ತಪ್ಪಿಸಿಕೊಂಡಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಉಳಿದ ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಹೊರ ರಾಜ್ಯದಿಂದ ಪೂರೈಕೆ!: ಜಿಲ್ಲೆಗೆ ಹೊರ ರಾಜ್ಯ ಹಾಗೂ ಬೆಂಗಳೂರಿನಿಂದ ಮಾದಕ ವಸ್ತು ಪೂರೈಕೆ ಆಗುತ್ತಿರುವುದೂ ಗೊತ್ತಾಗಿದೆ.

ಡಿವೈಎಸ್‌ಪಿ ದಿನೇಶ್ ಕುಮಾರ್‌, ಗ್ರಾಮಾಂತರ ಠಾಣೆಯ ಪಿಎಸ್‌ಐ ಚಂದ್ರಶೇಖರ್‌, ಜಿಲ್ಲಾ ಅಪರಾಧ ಪತ್ತೆ ದಳದ ಹಮೀದ್‌, ವೆಂಕಟೇಶ್‌, ಚಂದ್ರಶೇಖರ್‌, ಯೋಗೇಶ್ ಕುಮಾರ್‌, ನಿರಂಜನ್‌, ವಸಂತ್‌, ಅನಿಲ್‌ ಕುಮಾರ್, ಶರತ್‌, ಶಶಿಕುಮಾರ್‌, ಗ್ರಾಮಾಂತರ ಠಾಣೆಯ ದಿನೇಶ್, ನಗರ ಠಾಣೆಯ ಪ್ರವೀಣ್‌, ಸಿಡಿಆರ್‌ ಸೆಲ್‌ನ ರಾಜೇಶ್‌ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಆ ತಂಡಕ್ಕೆಎಸ್‌ಪಿ ಕ್ಷಮಾ ಮಿಶ್ರಾ ನಗದು ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.