ADVERTISEMENT

ಮಾರ್ಚ್‌ 7ರಿಂದ ಮೂರು ದಿನ ನ್ಯಾನೋ ಮೇಳ

ಹತ್ತು ರಾಷ್ಟ್ರಗಳು ಭಾಗಿ– ಡಾ.ಸಿ.ಎನ್‌. ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 16:06 IST
Last Updated 2 ಮಾರ್ಚ್ 2022, 16:06 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: 12ನೇ ವರ್ಷದ ‘ಬೆಂಗಳೂರು– ಇಂಡಿಯಾ ನ್ಯಾನೋ ಮೇಳ’ವು ಇದೇ 7ರಿಂದ 9ರವರೆಗೆ ವರ್ಚ್ಯುಯಲ್‌ ಮಾದರಿಯಲ್ಲಿ ನಡೆಯಲಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ನ್ಯಾನೋ ಮೇಳವು ಮೊದಲ ಬಾರಿಗೆ ವರ್ಚ್ಯುಯಲ್‌ ರೂಪದಲ್ಲಿ ನಡೆಯುತ್ತಿದೆ. ‘ಸುಸ್ಥಿರ ಅಭಿವೃದ್ಧಿಗಾಗಿ ನ್ಯಾನೋ ತಂತ್ರಜ್ಞಾನ’ ಎಂಬ ಧ್ಯೇಯ ವಾಕ್ಯದಡಿ ನಡೆಯುವ ಸಮಾವೇಶದಲ್ಲಿ ಕೆನಡಾ, ಇಸ್ರೇಲ್‌, ಜರ್ಮನಿ, ನೆದರ್ಲೆಂಡ್‌, ಜಪಾನ್‌ ಸೇರಿದಂತೆ ಹತ್ತು ರಾಷ್ಟ್ರಗಳು ಭಾಗವಹಿಸುತ್ತಿವೆ’ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನ್ಯಾನೋ ಮೇಳ ಉದ್ಘಾಟಿಸುವರು. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಮಾರ್ಚ್‌ 7 ಮತ್ತು 8ರಂದು ವಿವಿಧ ಚಟುವಟಿಕೆಗಳು ನಡೆಯಲಿವೆ. ಮಾರ್ಚ್‌ 9ರಂದು ಇಡೀ ದಿನ ತಲಾ ಒಂದು ಗಂಟೆ ಅವಧಿಯ ಟ್ಯೂಟೋರಿಯಲ್‌ ಮಾದರಿಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ನ್ಯಾನೋ ಔಷಧಿ, ನ್ಯಾನೋ ಫೋಟೋನಿಕ್ಸ್‌, ಜವಳಿ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆ, ಹೈಡ್ರೋಜನ್‌ ಆರ್ಥಿಕತೆ ಕುರಿತು ಹೆಚ್ಚಿನ ಗೋಷ್ಠಿಗಳು ನಡೆಯಲಿವೆ. ನವೋದ್ಯಮಗಳು, ಬೃಹತ್‌ ಕೈಗಾರಿಕೆಗಳು, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು, ವೆಂಚರ್‌ ಕ್ಯಾಪಿಟಲ್‌ಗಳನ್ನು ಕೇಂದ್ರೀಕರಿಸಲಾಗುವುದು ಎಂದರು.

ನ್ಯಾನೋ ವಿಜ್ಞಾನದಲ್ಲಿ ಪಿಎಚ್‌.ಡಿ ಅಧ್ಯಯನ ಮಾಡುತ್ತಿರುವ ಐವರು ಪ್ರತಿಭಾವಂತರಿಗೆ ರಾಜ್ಯ ಸರ್ಕಾರದಿಂದ ‘ನ್ಯಾನೋ ಎಕ್ಸಲೆನ್ಸ್‌ ಪುರಸ್ಕಾರ’ ಮತ್ತು ‘ಸಿ.ಎನ್‌.ಆರ್‌. ರಾವ್‌ ಪುರಸ್ಕಾರ’ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಪ್ರೊ.ನವಕಾಂತ ಭಟ್, ಸಮ್ಮೇಳನದ ಕಾರ್ಯಕಾರಿ ಸಮಿತಿ ಮುಖ್ಯಸ್ಥ ಜಗದೀಶ್ ಪಾಟಣಕರ್, ಅಧ್ಯಕ್ಷ ಪ್ರೊ.ಅಜಯ್ ಕುಮಾರ್ ಸೂದ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಬಸವರಾಜ ಪತ್ರಿಕಾಗೋಷ್ಠಿಯಲ್ಲಿದ್ದರು.

ನ್ಯಾನೋ ಫಾರ್ ಯಂಗ್: ರಸಪ್ರಶ್ನೆ ಸ್ಪರ್ಧೆ

‘ನ್ಯಾನೋ ಫಾರ್‌ ಯಂಗ್‌’ ಮತ್ತು ‘ನ್ಯಾನೋ ಕ್ವಿಝ್‌’ ರಸಪ್ರಶ್ನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 23 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ 650 ವಿದ್ಯಾರ್ಥಿಗಳು ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.