ಬೆಂಗಳೂರು: ದಶಕದಷ್ಟು ಹಳೆಯದಾದ ಅವೈಜ್ಞಾನಿಕ ಜಾತಿಗಣತಿಯನ್ನು ಕಸದ ಬುಟ್ಟಿಗೆ ಹಾಕಿ, ಹೊಸದಾಗಿ ಗಣತಿ ನಡೆಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿಗೆ ಆದೇಶ ಮಾಡಿದ್ದ ಸಿದ್ದರಾಮಯ್ಯ ಅವರೇ ಇಂದು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಅವೈಜ್ಞಾನಿಕವಾದ ವರದಿ ತಿರಸ್ಕರಿಸಿ, ಹೊಸದಾಗಿ ಸಮೀಕ್ಷೆ ನಡೆಸಲು ಆದೇಶ ನೀಡಬೇಕು. ಮರುಸಮೀಕ್ಷೆಯ ನಂತರ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಬೇಕು ಎಂದರು.
ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರಲ್ಲೇ ಒಮ್ಮತವಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ವರದಿಯ ಒಳಿತು- ಕೆಡುಕುಗಳ ಕುರಿತು ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಿ ಎಂದು ಆಗ್ರಹಿಸಿದರು.
ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಆರೋಪ:
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಅಪಪ್ರಚಾರ ನಡೆಸುತ್ತಿದೆ. ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ದೊಡ್ಡ ಹಗರಣಗಳೇ ನಡೆದಿದ್ದವು. ಬೆಲೆ ಏರಿಕೆಗೆ ನಾಂದಿ ಹಾಡಿದ್ದೇ ಯುಪಿಎ. ಯಾವುದೇ ಜನಪರ ಯೋಜನೆಗಳನ್ನು ನೀಡುವಲ್ಲೂ ವಿಫಲವಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಹಗರಣಗಳಿಗೆ ಅವಕಾಶ ಇಲ್ಲದೆ ಆಡಳಿತ ನೀಡಿದ್ದಾರೆ. ರಾಜ್ಯಕ್ಕೂ ಸಾಕಷ್ಟು ಅನುದಾನ, ನೆರವು ನೀಡಿದ್ದಾರೆ ಎಂದರು.
ಶಾಸಕ ಶಿವರಾಂ ಹೆಬ್ಬಾರ್ಗೂ ಬಿಜೆಪಿಗೂ ಮುಗಿದ ಅಧ್ಯಾಯ. ಅವರು ಈಗ ಬಿಜೆಪಿಯಲ್ಲಿ ಇಲ್ಲ. ಸದನದಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೆ ಹೆಬ್ಬಾರ್ ಕುಳಿತೇ ಇದ್ದರು. ನಮ್ಮ ಲೆಕ್ಕದಿಂದ ಅವರನ್ನು ಕೈ ಬಿಟ್ಟಿದ್ದೇವೆಆರ್. ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
‘ಜನಜಾಗೃತಿ ಮೂಡಿಸಿದ ಯಾತ್ರೆ’ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಮೊದಲ ಹಂತದ ಜನಾಕ್ರೋಶ ಯಾತ್ರೆ ಒಂಬತ್ತು ಜಿಲ್ಲೆ ತಲುಪಿದೆ. 1115 ಕಿ.ಮೀ ಪ್ರವಾಸ ಮುಗಿದಿದೆ. 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಯಾತ್ರೆಯನ್ನು 3.50 ಕೋಟಿ ಜನರು ವೀಕ್ಷಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಯಾತ್ರೆ ಯಶಸ್ವಿಯಾಗಿದೆ ಎಂದು ವಿಜಯೇಂದ್ರ ಹೇಳಿದರು. ನಿಪ್ಪಾಣಿಯಿಂದ 2 ನೇ ಹಂತದ ಹೋರಾಟ: ಎರಡನೇ ಹಂತದ ಜನಾಕ್ರೋಶ ಯಾತ್ರೆ ಬೆಳಗಾವಿ ಜಿಲ್ಲೆ ನಿಪ್ಪಾಣಿಯಿಂದ ಮಂಗಳವಾರ ಆರಂಭವಾಗಲಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ತಿಳಿಸಿದರು. ಡಾ.ಬಿ.ಅರ್.ಅಂಬೇಡ್ಕರ್ ಅವರು ನಿಪ್ಪಾಣಿಗೆ ಆಗಮಿಸಿ 100 ವರ್ಷ ಆಗುತ್ತಿದೆ. ಇದನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಇದೇ 16 ರಂದು ಬೆಳಗಾವಿ ನಗರದಲ್ಲಿ ಜನಾಕ್ರೋಶ ಕಾರ್ಯಕ್ರಮ ಇದೆ.
ಕಾಂಗ್ರೆಸ್‌ನಿಂದ ಬುದ್ದಿಕಲಿಯಬೇಕಿಲ್ಲ: ಆರ್. ಅಶೋಕ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಬಿಜೆಪಿ ಹೋರಾಟ ಕುರಿತು ಕಾಂಗ್ರೆಸ್ ನಾಯಕರು ನೀಡುತ್ತಿರುವ ಪ್ರತಿಕ್ರಿಯೆ ಹೋರಾಟದ ಯಶಸ್ಸಿಗೆ ಸಾಕ್ಷಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು. ಸುದ್ದಿಗಾರರರ ಜತೆ ಮಾತನಾಡಿದ ಅವರು ರಾಜ್ಯದ ಆಡಳಿತ ತುಘಲಕ್ ದರ್ಬಾರ್ ಆಗಿದೆ. ಯಾರೂ ಕೇಳುವವರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಲಿ ಕುರ್ಚಿಯಲ್ಲಿದ್ದಾರೆ. ಷರಿಯಾ ಕಾನೂನು ಜಾರಿ ಮಾಡುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೊಟ್ಟು ಇಟ್ಟುಕೊಂಡು ದೇವಸ್ಥಾನಗಳಲ್ಲಿ ಹೋಮ ಮಾಡಿಸುತ್ತಿದ್ದಾರೆ. ಎಲ್ಲವನ್ನೂ ಮುಸ್ಲಿಮರಿಗೆ ಧಾರೆ ಎರೆಯುತ್ತಿದ್ದಾರೆ ಎಂದು ಟೀಕಿಸಿದರು. ಭಾರತದ ಸಂಸತ್ತು ಯಾವತ್ತಿಗೂ ಶ್ರೇಷ್ಠ. ಹಿಂದೆ ಮನಮೋಹನ್ ಸಿಂಗ್ ಅವಧಿಯಲ್ಲಿ ತಂದ ಕಾನೂನಿನಿಂದಾಗಿ ವಕ್ಫ್ ಭೂಮಿ ಕಬಳಿಕೆಯಾಗಿದೆ. ತಿದ್ದುಪಡಿ ಕಾನೂನನ್ನು ಎಲ್ಲರೂ ಪಾಲಿಸಲೇಬೇಕು. ಕಾಂಗ್ರೆಸ್‌ನವರು 50 ಸಲ ಸಂವಿಧಾನ ಬದಲಿಸಿದ್ದಾರೆ. ಅವರಿಂದ ಬಿಜೆಪಿ ಬುದ್ಧಿ ಕಲಿಯಬೇಕಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.