ADVERTISEMENT

ಗುಡುಗು, ಸಿಡಿಲಿನ ಅಪಾಯದಿಂದ ಸುರಕ್ಷಿತವಾಗಿರುವುದು ಹೇಗೆ? ಇಲ್ಲಿವೆ ಸಲಹೆಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2025, 9:30 IST
Last Updated 26 ಮಾರ್ಚ್ 2025, 9:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಮುಂಗಾರು ಆಗಮನಕ್ಕೂ ಮುನ್ನ ರಾಜ್ಯದಲ್ಲಿ ಆಗಾಗ ಮಳೆ ಸುರಿಯಲಾರಂಭಿಸಿದೆ. ಗಾಳಿ, ಗುಡುಗು, ಮಿಂಚು, ಆಲಿಕಲ್ಲು ಸಮೇತ ಮಳೆಯಾಗುತ್ತಿದೆ. ಹೀಗಾಗಿ ಅಪಾಯದಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಮುಂಜಾಗೃತಾ ಕ್ರಮವಹಿಸಬೇಕು ಎನ್ನುವ ಬಗ್ಗೆ ಉತ್ತರಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವು ಸಲಹೆಗಳನ್ನು ನೀಡಿದೆ.

  • ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು ಮೀನುಗಾರಿಕೆ ಮತ್ತು ದೋಣಿಗಳನ್ನು ನಡೆಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗುವುದು ಸೂಕ್ತವಲ್ಲ.

    ADVERTISEMENT
  • ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ. ಸುರಕ್ಷಿತವಾದ ಕಟ್ಟಡಗಳಲ್ಲಿ ಅಶ್ರಯ ಪಡೆಯಿರಿ ಬೆಟ್ಟ ಗುಡ್ಡಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು ಆಶ್ರಯ ಪಡೆಯಬಹುದು.

  • ನೀರಿನ ಮೂಲಗಳಾದ ಕೆರೆ, ತೋಡು ಮತ್ತು ನದಿಗಳಿಂದ ದೂರವಿರಿ. ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರಿ.

  • ವಾಹನ ಚಾಲನೆ ಮಾಡುತ್ತಿದ್ದರೆ, ತಕ್ಷಣವೇ ನಿಲ್ಲಿಸಿ ಅದರಲ್ಲೇ ಆಶ್ರಯ ಪಡೆಯಿರಿ. ವಾಹನದ ಕಿಟಕಿಗಳನ್ನು ಮುಚ್ಚಿ. ಅರಣ್ಯ ಪ್ರದೇಶದಿಂದ ಹಾಗೂ ಗಿಡ-ಮರಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಸಾಗಿರಿ. ಮೋಟಾರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನಗಳ ಸಂಚಾರವನ್ನು ಮಾಡದಿರಿ

  • ಚಾರ್ಜ್‌ಗೆ ಹಾಕಿರುವ ಫೋನ್‌ ಅನ್ನು ಬಳಸಬೇಡಿ. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ, ಅಪಾಯವನ್ನು ಕಡಿಮೆ ಮಾಡಲು ದೂರ ನಿಂತು ಅಂತರವನ್ನು ಕಾಯ್ದುಕೊಳ್ಳಿ.

  • ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಾಕಷ್ಟು ಸಮಯವಿಲ್ಲದಿದ್ದರೆ, ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ಕಿವಿಗಳನ್ನು ಮುಚ್ಚಿಕೊಳ್ಳಿ.

  • ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಮುನ್ನಚ್ಚರಿಕೆಗಳಿಗಾಗಿ SACHET APP. DAMNY APP, SIDILU APP, Common Alerting Protocol (CAP) ಮುಖಾಂತರಗಳಿಂದ ಹವಾಮಾನ ಇಲಾಖೆ ನೀಡುವ ಸಂದೇಶಗಳನ್ನು ಗಮನಿಸಿ.

  • ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಅಶ್ರಯ ಪಡೆಯಬೇಡಿ. ಇವು ಮಿಂಚನ್ನು ಆಕರ್ಷಿಸುತ್ತವೆ. ಲೋಹದ ವಸ್ತುಗಳನ್ನು ಬಳಸಬೇಡಿ. ಬೈಕುಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರಿ.

  • ಕಬ್ಬಿಣದ ಸರಳುಗಳಿಂದ ಕೂಡಿದ ಕೊಡೆ (ಛತ್ರಿ)ಗಳನ್ನು ಬಳಸಬೇಡಿ.

  • ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಮತ್ತು ವಿದ್ಯುತ್ ಶಕ್ತಿ ಸಂಪರ್ಕದಿಂದ ದೂರವಿರಿ.

  • ಮಕ್ಕಳು, ವಯೋವೃದ್ಧರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ನೋಡಿಕೊಳ್ಳಿ.

  • ಹಾರುವ ಮತ್ತು ಅಪಘಾತಕ್ಕೆ ಕಾರಣವಾಗಬಹುದಾದ ಮರದ ಕಟ್ಟಿಗೆ ಅಥವಾ ಇತರೆ ಯಾವುದೇ ಅವಶೇಷಗಳಿಂದ ದೂರವಿರಿ.

  • ಗುಡುಗು ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಮುಂದೂಡಿ.

  • ಆಟದ ಮೈದಾನ, ಉದ್ಯಾನವನಗಳು ಈಜುಕೊಳ ಮತ್ತು ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸಿ. ದೋಣಿ ವಿಹಾರ ಅಥವಾ ಈಜುತ್ತಿದ್ದರೆ, ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಿರಿ.

  • ಕೆಲವು ಸಲ ಮಿಂಚಿನ ಹೊಡೆತದಿಂದಾಗಿ ಕಾಳ್ಗಿಚ್ಚು ಸಂಭವಿಸುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಜಿಲ್ಲಾಡಳಿತದ ತುರ್ತು ಕಾರ್ಯಚರಣಾ ಕೇಂದ್ರಕ್ಕೆ ಮಾಹಿತಿ ನೀಡಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.