ADVERTISEMENT

ಡಿ.ಬಿ.ಕುಪ್ಪೆ ಅರಣ್ಯ: ಮಧು ಮೃತದೇಹ ಮತ್ತೆ ಹುಲಿ ಪಾಲು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 5:51 IST
Last Updated 26 ಡಿಸೆಂಬರ್ 2018, 5:51 IST
ಹುಲಿ ದಾಳಿಯಿಂದ ಮೃತಪಟ್ಟ ಮಧು ಪತ್ನಿ ಭಾಗ್ಯ ಮತ್ತು ಮಕ್ಕಳು
ಹುಲಿ ದಾಳಿಯಿಂದ ಮೃತಪಟ್ಟ ಮಧು ಪತ್ನಿ ಭಾಗ್ಯ ಮತ್ತು ಮಕ್ಕಳು   

ಎಚ್.ಡಿ.ಕೋಟೆ: ಡಿ.ಬಿ.ಕುಪ್ಪೆ ಅರಣ್ಯದಲ್ಲಿ ಸೋಮವಾರ ದೊರೆತಿದ್ದ ಮಾನಿಮೂಲೆ ಹಾಡಿಯ ನಿವಾಸಿ ಮಧು (29) ಮೃತ ದೇಹದ ಭಾಗಗಳನ್ನು ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಮತ್ತಷ್ಟು ದೂರಕ್ಕೆ ಎಳೆದುಕೊಂಡು ಹೋಗಿ ಹುಲಿ ತಿಂದಿದ್ದು, ಆತಂಕ ಸೃಷ್ಟಿಸಿದೆ.

ಮೃತದೇಹದ ಭಾಗಗಳನ್ನು ಕಾಡಿನಿಂದ ಗ್ರಾಮಕ್ಕೆ ತರದಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸ್ಥಳ ಮಹಜರು ನಡೆಸಬೇಕು ಎಂದು ಅಧಿಕಾರಿಗಳು ಮೃತದೇಹದ ಭಾಗಗಳನ್ನು ಸ್ಥಳದಲ್ಲೇ ಬಿಟ್ಟಿದ್ದರು. ಕತ್ತಲಾಯಿತೆಂದು ವಾಚರ್‌ ಒಬ್ಬರನ್ನು ಮೃತದೇಹ ಕಾಯಲು ನೇಮಿಸಿದರು. ಆದರೆ, ರಾತ್ರಿ ವೇಳೆ ಇಲ್ಲಿ ಹಗುರ ಮಳೆಯಾಯಿತು. ಇದರಿಂದ ರಕ್ಷಣೆ ಪಡೆಯಲು ವಾಚರ್ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ದೇಹದ ಭಾಗಗಳನ್ನು ಸುಮಾರು 150 ಮೀಟರ್‌ನಷ್ಟು ದೂರಕ್ಕೆ ಎಳೆದುಕೊಂಡು ಹೋಗಿ ಮತ್ತಷ್ಟು ಭಾಗಗಳನ್ನು ತಿಂದಿದೆ.

ADVERTISEMENT

ಮಂಗಳವಾರ ಬೆಳಿಗ್ಗೆ ಮತ್ತೆ ಮೃತದೇಹಕ್ಕಾಗಿ ಶೋಧ ನಡೆಸಿದ್ದು, ಕಾಡಿನೊಳಗೆ ಪತ್ತೆ ಹಚ್ಚಲಾಯಿತು. ನಂತರ, ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಎಚ್.ಡಿ.ಕೋಟೆ ತಾಲ್ಲೂಕಿನ ಮಾನಿಮೂಲೆ ಹಾಡಿಯಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ಮಧು ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು –ಪ್ರಜಾವಾಣಿ ಚಿತ್ರ

ಅರಣ್ಯ ಇಲಾಖೆ ಅಧಿಕಾರಿಗಳು ಮನಸ್ಸು ಮಾಡಿದ್ದರೆ ಸೋಮವಾರ ಕತ್ತಲಾಗುವುದಕ್ಕೆ ಮುಂಚಿತವಾಗಿಯೇ ಮೃತದೇಹದ ಭಾಗಗಳನ್ನು ತರಬಹುದಿತ್ತು. ಆದರೆ, ನಿರ್ಲಕ್ಷ್ಯ ವಹಿಸಿದರು ಎಂದು ಡಿ.ಬಿ.ಕುಪ್ಪೆ ಗ್ರಾ.ಪಂ. ಅಧ್ಯಕ್ಷ ಎ.ಸಿ.ತಿರುಪತಿ ಅಸಮಾಧಾನ ವ್ಯಕ್ತಪಡಿಸಿದರು.‌

ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ‘ಮೃತ ಮಧು ಪತ್ನಿ ಭಾಗ್ಯ ಅವರಿಗೆ ₹ 5 ಲಕ್ಷ ಪರಿಹಾರ ನೀಡಲಾಗುವುದು. ಮೃತನ ಸೋದರರೊಬ್ಬರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡಲಾಗುವುದು’ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್.ನಾರಾಯಣಸ್ವಾಮಿ ಭರವಸೆ ನೀಡಿ, ಗ್ರಾಮಸ್ಥರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.