ADVERTISEMENT

ಬೈಕ್ ಸವಾರರನ್ನು ಬೆನ್ನಟ್ಟಿದ ಹುಲಿ

ವಯನಾಡು ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ಘಟನೆ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 20:00 IST
Last Updated 30 ಜೂನ್ 2019, 20:00 IST
ಬೈಕ್‌ ಸವಾರರನ್ನು ಅಟ್ಟಿಸಿಕೊಂಡು ಬಂದ ಹುಲಿ
ಬೈಕ್‌ ಸವಾರರನ್ನು ಅಟ್ಟಿಸಿಕೊಂಡು ಬಂದ ಹುಲಿ   

ಗುಂಡ್ಲುಪೇಟೆ: ಕೇರಳದ ವಯನಾಡು ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ಹುಲಿ ಬೈಕ್ ಸವಾರರನ್ನು ಬೆನ್ನಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲೆಹೊಳೆ ವಲಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಇದು ನಡೆದಿದೆ.

ಕೇರಳದ ಸುಲ್ತಾನ್ ಬತ್ತೇರಿ ಕಡೆಯಿಂದ ಸವಾರರು ವಿಡಿಯೊ ಮಾಡುತ್ತ ಬರುವಾಗ ಹುಲಿಯು ಬೈಕ್‌ ಅನ್ನು ಬೆನ್ನಟ್ಟಿದೆ. ಆಗ ಸವಾರರು ವೇಗ ಹೆಚ್ಚಿಸಿಕೊಂಡು ಪಾರಾಗಿದ್ದಾರೆ. ಹುಲಿ ಓಡುತ್ತಾ ಹತ್ತಿರ ಬರುತ್ತಿದ್ದಂತೆ ವಿಡಿಯೊ ಮಾಡುತ್ತಿದ್ದ ಹಿಂಬದಿ ಸವಾರ ಭಯದಿಂದ ಕೂಗಿದ್ದಾನೆ. ಕೇರಳ ಮತ್ತು ತಮಿಳುನಾಡಿನ ಕಡೆಯಿಂದ ರಾಜ್ಯಕ್ಕೆ ಬರುವಾಗ ಅನೇಕ ಕಾಡುಪ್ರಾಣಿಗಳು ರಸ್ತೆಯ ಬದಿಯಲ್ಲಿ ಕಾಣಸಿಗುತ್ತವೆ. ಪ್ರಯಾಣಿಕರು ಫೋಟೊ ತೆಗೆಯುತ್ತ ರಸ್ತೆಯಲ್ಲಿ ನಿಲ್ಲುತ್ತಾರೆ. ಇದರಿಂದ ಪ್ರಾಣಿಗಳು ರಸ್ತೆ ದಾಟಲು ತೊಂದರೆಯಾಗುತ್ತದೆ. ಆಗ ಕೆಲ ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಕರ್ಕಶ ಶಬ್ದಕ್ಕೆ ಆನೆಗಳು ದಾಳಿ ಮಾಡಿವೆ.

ADVERTISEMENT

‘ಬೈಕ್ ಸವಾರರು ಫೋಟೊ, ವಿಡಿಯೊ ತೆಗೆಯುತ್ತ ಹುಲಿ ರಸ್ತೆ ದಾಟುವುದಕ್ಕೆ ತೊಂದರೆ ಮಾಡಿರಬಹುದು. ಇದರಿಂದ ರೊಚ್ಚಿಗೆದ್ದ ಹುಲಿ ದಾಳಿ ಮಾಡಲು ಯತ್ನಿಸಿರಬಹುದು' ಎಂದು ವನ್ಯಜೀವಿ ಸಾಕ್ಷ್ಯಚಿತ್ರ ನಿರ್ಮಾಪಕ ಸೇನಾನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿಲ್ಲ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.