ADVERTISEMENT

ನಾಗರಹೊಳೆ: ಅನಾಥವಾಗಿದ್ದ ಮೂರು ಹುಲಿ ಮರಿಗಳಲ್ಲಿ ಗಂಡು ಹುಲಿ ಸಾವು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 12:09 IST
Last Updated 27 ನವೆಂಬರ್ 2022, 12:09 IST
   

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನಲ್ಲಿ ಉರುಳಿಗೆ ಸಿಲುಕಿ ಈಚೆಗೆ ಹತ್ಯೆಯಾದ ಹೆಣ್ಣು ಹುಲಿಯ ಮೂರು ಹುಲಿ ಮರಿಗಳ ಪೈಕಿ ಒಂದು ಗಂಡು ಹುಲಿ ಮರಿ ಮೃತಪಟ್ಟಿದೆ.

10ರಿಂದ 11 ತಿಂಗಳು ವಯಸ್ಸಿನ ಗಂಡು ಮರಿಹುಲಿಯ ಕಳೇಬರವು ಅಂತರಸಂತೆ ವನ್ಯಜೀವಿ ವಲಯದ ತಾರಕ ಶಾಖೆಯ ದಮ್ಮನಕಟ್ಟೆ ಗಸ್ತಿನ ತಾರಕ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

ತಾಯಿ ಹುಲಿ ಹತ್ಯೆಗೊಳಗಾದ ನಂತರ ಅರಣ್ಯ ಇಲಾಖೆಯು ಟ್ರ್ಯಾಪಿಂಗ್ ಕ್ಯಾಮೆರಾಗಳನ್ನು ಅಳವಡಿಸಿ, ಸಾಕಾನೆಗಳ ಸಹಾಯದೊಂದಿಗೆ ಮತ್ತು ದಿನ ನಿತ್ಯ ಸಿಬ್ಬಂದಿ ತಂಡ ರಚಿಸಿಕೊಂಡು ಮರಿಹುಲಿಗಳ ಚಲನವಲನಗಳ ಮೇಲೆ ನಿರಂತರವಾಗಿ ನಿಗಾ ವಹಿಸಿತ್ತು. ಕ್ಯಾಮೆರಾಗಳಲ್ಲಿ ಸೆರೆಯಾಗುತ್ತಿದ್ದ ಛಾಯಾಚಿತ್ರಗಳು ಮತ್ತು ವಿಡಿಯೊ ಗಮನಿಸುತ್ತಿದ್ದಾಗ ಮರಿಗಳು ಆರೋಗ್ಯವಾಗಿವೆ ಎಂದು ಇಲಾಖೆ ತಿಳಿಸಿತ್ತು.

ADVERTISEMENT

‘ಮರಿಯ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದಾಗ ಕುತ್ತಿಗೆ, ಭುಜದ ಬಳಿ ತೀವ್ರವಾದ ಗಾಯಗಳಾಗಿದ್ದು ಮತ್ತು ಮುಂಗಾಲಿನ ಮೂಳೆ ಮುರಿದಿರುವುದು, ಬೇರೆ ಹುಲಿಯೊಂದಿಗೆ ಕಾದಾಟ ನಡೆಸಿ ಮೃತಪಟ್ಟಿರುವುದು ಗೊತ್ತಾಗಿದೆ. ಕೂಂಬಿಂಗ್ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸಿ ಮರಿ ಹುಲಿಗಳ ಚಲನವಲನ ಮತ್ತು ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು’ ಎಂದು ವಹಿಸಲಾಗುವುದು ಎಂದುನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಡಿಸಿಎಫ್‌ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ಎಸಿಎಫ್‌ ಕೆ.ಎನ್.ರಂಗಸ್ವಾಮಿ, ಮೇಟಿಕುಪ್ಪೆ ವನ್ಯಜೀವಿ ಉಪ ವಿಭಾಗದ ಪಶು ವೈದ್ಯಾಧಿಕಾರಿ ಡಾ.ರಮೇಶ, ಡಾ.ಪ್ರಸನ್ನ ಬಿ.ಬಿ., ಕೃತಿಕಾ ಎ., ಜೀವನ್ ಕೃಷ್ಣಪ್ಪ, ಅಂತರಸಂತೆ ಗ್ರಾ.ಪಂ. ಅಧ್ಯಕ್ಷ ಎಂ.ಸುಬ್ರಮಣ್ಯ, ವಲಯ ಅರಣ್ಯಾಧಿಕಾರಿ ಎಸ್.ಎಸ್.ಸಿದ್ದರಾಜು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಕಳೇಬರವನ್ನು ಸುಟ್ಟು ಹಾಕಲಾಯಿತು.

ಅನಾಥವಾಗಿದ್ದ ಮೂರು ಹುಲಿ ಮರಿಗಳು ಬೇಟೆಯಾಡುವುದನ್ನು ಕಲಿತಿವೆ ಎಂದು ಅರಣ್ಯ ಇಲಾಖೆ ಈಚೆಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.