ADVERTISEMENT

Karnataka Tiger | ರಾಜ್ಯದಲ್ಲಿರುವ ಹುಲಿಗಳ ಸಂಖ್ಯೆ 393: ಸಮೀಕ್ಷೆ

‘ಹುಲಿ ಸಂರಕ್ಷಿತ ಪ್ರದೇಶಗಳ ಹುಲಿಗಳ ಸಮೀಕ್ಷೆ- 2024’ ವರದಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 0:30 IST
Last Updated 29 ಮಾರ್ಚ್ 2025, 0:30 IST
<div class="paragraphs"><p>ಕಬಿನಿ ಬಳಿ ಮರಿ ಕಚ್ಚಿಕೊಂಡು ರಸ್ತೆ ದಾಟಿದ ಹುಲಿ</p></div>

ಕಬಿನಿ ಬಳಿ ಮರಿ ಕಚ್ಚಿಕೊಂಡು ರಸ್ತೆ ದಾಟಿದ ಹುಲಿ

   

ಜೆಎಲ್‌ಆರ್‌ ಸಿಬ್ಬಂದಿ ಚಿತ್ರ

ಬೆಂಗಳೂರು: ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಂದಾಜು 393 ಹುಲಿಗಳಿರುವುದು ದಾಖಲಾಗಿದ್ದು, ಕೆಲವು ಹುಲಿಗಳು ಸಂರಕ್ಷಿತ ಪ್ರದೇಶಗಳಿಂದ ಇತರ ಹುಲಿ ವಾಸಸ್ಥಾನ ಪ್ರದೇಶಗಳತ್ತ ವಲಸೆ ಹೋಗುತ್ತಿವೆ ಎಂದು ‘ಹುಲಿಗಳ ಸಮೀಕ್ಷೆ- 2024’ರಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ದೇಶದ ಹುಲಿ ಅಭಯಾರಣ್ಯಗಳಲ್ಲಿ ನಡೆದ ವಾರ್ಷಿಕ ಮೇಲ್ವಿಚಾರಣಾ ಸಮೀಕ್ಷೆಯ ಭಾಗವಾಗಿ ರಾಜ್ಯದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ (ಬಿಆರ್‌ಟಿ) ಮತ್ತು ಕಾಳಿ (ದಾಂಡೇಲಿ-ಅಣಶಿ) ಅಭಯಾರಣ್ಯದಲ್ಲಿ 2023ರ ನವೆಂಬರ್ ಮತ್ತು 2024ರ ಫೆಬ್ರವರಿ ಮಧ್ಯೆ ನಡೆಸಿದ ಸಮೀಕ್ಷಾ ವರದಿಯಲ್ಲಿ ಈ ಅಂಶವಿದೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ‘ಕರ್ನಾಟಕ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ಹುಲಿಗಳ ಸಮೀಕ್ಷೆ- 2024’ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಮಾರ್ಗಸೂಚಿಗಳ ಪ್ರಕಾರ, ಅಖಿಲ ಭಾರತ ಹುಲಿ ಗಣತಿಯ ಭಾಗವಾಗಿ ಎಲ್ಲ ರಾಜ್ಯಗಳ ಹುಲಿ ವಾಸಸ್ಥಾನ ಪ್ರದೇಶಗಳಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ, ಆನೆ, ಇತರ ಬೇಟೆ ಹಾಗೂ ಸಸ್ಯಾಹಾರಿ ಪ್ರಾಣಿಗಳ ಗಣತಿ ನಡೆಸಲಾಗುತ್ತದೆ. ಹುಲಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ 2015ರಿಂದ ಈ ಸಮೀಕ್ಷೆ ನಡೆಸಲಾಗುತ್ತಿದೆ.

ಬೆಂಗಳೂರಿನ ಅರಣ್ಯ ಭವನದಲ್ಲಿರುವ ವನ್ಯಜೀವಿ ತಾಂತ್ರಿಕ ಘಟಕದಲ್ಲಿ ಈ ಸಮೀಕ್ಷೆಯ ಮಾಹಿತಿಯನ್ನು ವಿಶ್ಲೇಷಿಸಿ, ‘ಹುಲಿಗಳ, ಸಸ್ಯಾಹಾರಿ ಹಾಗೂ ಇತರ ಪ್ರಾಣಿಗಳ ವಾರ್ಷಿಕ ವರದಿ– 2024' ಪ್ರಕಟಿಸಲಾಗಿದೆ.

ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 2,160 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುಮಾರು 61 ಲಕ್ಷ ವನ್ಯಜೀವಿ ಚಿತ್ರಗಳು ಪಡೆಯಲಾಗಿದೆ. ಹುಲಿ ಚಿತ್ರಗಳನ್ನು ಎ.ಐ (ಕೃತಕ ಬುದ್ದಿಮತ್ತೆ) ಆಧಾರಿತ ತಂತ್ರಾಂಶದ ಮೂಲಕ ಪ್ರತ್ಯೇಕಿಸಲಾಗಿದ್ದು, ಪ್ರತಿ ಹುಲಿಯ ಎರಡು ಬದಿಯಲ್ಲಿನ ವಿಭಿನ್ನ ಪಟ್ಟೆ ವಿನ್ಯಾಸವನ್ನು ಗುರುತಿಸುವ ಮೂಲಕ ವಿಶಿಷ್ಟ ಹುಲಿಗಳನ್ನು ಗುರುತಿಸಲಾಗುತ್ತದೆ. ಮುಂಬರುವ ‘ಅಖಿಲ ಭಾರತ ಹುಲಿ ಅಂದಾಜು ವರದಿ- 2026’ ರಿಂದ ಕರ್ನಾಟಕದಲ್ಲಿರುವ ಹುಲಿಗಳ ನಿಖರ ಸಂಖ್ಯೆ ಲಭ್ಯವಾಗಲಿದೆ.

ಹುಲಿಗಳ ಚಲನ ಚಟುವಟಿಕೆ ಕಾರಣದಿಂದ, ರಾಜ್ಯದ ಐದು ಹುಲಿ ಸಂರಕ್ಷಣೆ ಪ್ರದೇಶಗಳ ವಾರ್ಷಿಕ ಹುಲಿ ಸಮೀಕ್ಷೆ ಫಲಿತಾಂಶದಲ್ಲಿ ಏರುಪೇರು ಕಾಣಬಹುದು. ಆದರೆ, ಇಡೀ ರಾಜ್ಯದಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸಮೀಕ್ಷೆ ಮಾಡಲಾಗುತ್ತಿದ್ದು, ಐದು ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ಇತರ ಹುಲಿ ವಾಸಸ್ಥಾನಗಳಲ್ಲೂ ಹುಲಿಗಳ ಸಂಖ್ಯೆ ಕ್ರಮೇಣ ಏರಿಕೆ ಆಗಿದೆ ಎಂದೂ ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.