ADVERTISEMENT

ಸದನಲದಲ್ಲಿ ಮತ್ತೆ ಟಿಪ್ಪು ಜಯಂತಿ ಸದ್ದು: ಬಿಜೆಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 15:28 IST
Last Updated 9 ಡಿಸೆಂಬರ್ 2025, 15:28 IST
<div class="paragraphs"><p> ಬೆಳಗಾವಿ ಸುವರ್ಣ ಸೌಧ  </p></div>

ಬೆಳಗಾವಿ ಸುವರ್ಣ ಸೌಧ

   

ಬೆಳಗಾವಿ (ಸುವರ್ಣ ವಿಧಾನಸೌಧ): ರಾಜ್ಯದಲ್ಲಿ ಟಿಪ್ಪು ಜಯಂತಿ ವಿಚಾರವನ್ನು ಸದನದಲ್ಲಿ ಸರ್ಕಾರದ ಗಮನಕ್ಕೆ ತರಲು ಮುಂದಾದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ನಡೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಟಿಪ್ಪು ಜಯಂತಿ ಆಚರಣೆಯ ಪ್ರಸ್ತಾಪವನ್ನು ಸಮರ್ಥಿಸಿಕೊಂಡಿರುವ ಕಾಶಪ್ಪನವರ್, ‘ಎಲ್ಲ ಜಾತಿ, ಜನಾಂಗ ಇರುವ ಜಾತ್ಯತೀತ ರಾಷ್ಟ್ರದಲ್ಲಿ ಯಾಕೆ ವಿರೋಧ? ಅಲ್ಪಸಂಖ್ಯಾತರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲವೇ. ಯಡಿಯೂರಪ್ಪ, ಜಗದೀಶ ಶೆಟ್ಟರ್ ಟಿಪ್ಪು ವೇಷ ಹಾಕಿರಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ‘ಟಿಪ್ಪು ಜಯಂತಿಯನ್ನು ಸರ್ಕಾರ ಆಚರಣೆ ಮಾಡಬೇಕು. ಈ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕು ಎಂದು ವಿಜಯಾನಂದ ಕಾಶಪ್ಪನವರ್ ಹೇಳಿರುವುದು ವೈಯಕ್ತಿಯ ಅಭಿಪ್ರಾಯ. ಟಿಪ್ಪು ಒಬ್ಬ ದೇಶಭಕ್ತ. ಜಯಂತಿ ಆಚರಿಸಿದರೆ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ಎಂದರೆ ಟಿಪ್ಪು ಪಾರ್ಟಿ. ಪ್ರಚಾರ ಗಿಟ್ಟಿಸಲು ಈ ತಂತ್ರ. ಇಸ್ಲಾಂನಲ್ಲಿ ವ್ಯಕ್ತಿಗಳ ಜಯಂತಿ ಆಚರಣೆ ಮಾಡುವುದು ನಿಷೇಧವಿದೆ. ಅಧಿವೇಶನದಲ್ಲಿ ಕಾಲಹರಣ ಮಾಡಲು ಟಿಪ್ಪು ಕಾರ್ಡ್ ಉಪಯೋಗಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

‘ಟಿಪ್ಪು ಸುಲ್ತಾನನಿಗೂ, ಉತ್ತರ ಕರ್ನಾಟಕಕ್ಕೂ ಏನು ಸಂಬಂಧ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಚರ್ಚೆ ಮಾಡಬೇಕು. ಅದು ಬಿಟ್ಟು ಸರ್ಕಾರ ವೈಫಲ್ಯಗಳನ್ನು ಮರೆಮಾಚಲು ಟಿಪ್ಪು ಜಯಂತಿಗೆ ಮುಂದಾಗಿದೆ’ ಎಂದು ಬಿಜೆಪಿಯ ಎಸ್.ಆರ್. ವಿಶ್ವನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.