ADVERTISEMENT

ಕೊಡಗಿನಲ್ಲಿ ಟಿಪ್ಪು ಜಯಂತಿಗೆ ವಿರೋಧ

‘ಕರಾಳ ದಿನ’ ಆಚರಿಸಲು ವಿರೋಧಿ ಹೋರಾಟ ಸಮಿತಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 20:15 IST
Last Updated 3 ನವೆಂಬರ್ 2018, 20:15 IST

ಮಡಿಕೇರಿ: ರಾಜ್ಯದಲ್ಲಿ ನವೆಂಬರ್ 10ರಂದು ನಡೆಯುವ ಟಿಪ್ಪು ಜಯಂತಿಗೆ ಕೊಡಗಿನಲ್ಲಿ ಮತ್ತೆ ವಿರೋಧ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಜಯಂತಿ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಎಚ್ಚರಿಸಿದೆ.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮತಕ್ಕಾಗಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿತ್ತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವೂ ಜಯಂತಿ ಆಚರಣೆಗೆ ಮುಂದಾಗಿರುವುದು ವಿಷಾದನೀಯ. ಬಲವಂತದಿಂದ ಕಾರ್ಯಕ್ರಮ ನಡೆಸಿದರೆ ಅಂದು ಕೊಡಗಿನಲ್ಲಿ ಕರಾಳ ದಿನ ಆಚರಣೆ ಮಾಡುತ್ತೇವೆ’ ಎಂದು ಸಮಿತಿ ಸಂಚಾಲಕ ಅಭಿಮನ್ಯು ಕುಮಾರ್‌ ತಿಳಿಸಿದರು.

‘2015ರಲ್ಲಿ ಜಯಂತಿ ಆಚರಣೆ ವೇಳೆ ಹತ್ಯೆಯಾಗಿದ್ದ ಕುಟ್ಟಪ್ಪ ಮನೆಗೆ ಭೇಟಿ ನೀಡಿದ್ದ ಕುಮಾರಸ್ವಾಮಿ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಯಂತಿ ಆಚರಣೆ ಕೈಬಿಡುತ್ತೇವೆಂದು ಭರವಸೆ ನೀಡಿದ್ದರು. ಈಗ ಮಾತಿಗೆ ತಪ್ಪಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಸಂಘರ್ಷಕ್ಕೆ ದಾರಿ ಮಾಡಿಕೊಡದೇ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸಕ್ಕೆ ಸಮ್ಮಿಶ್ರ ಸರ್ಕಾರ ಮುಂದಾಗಿದೆ. ಅಲ್ಲದೇ ಕಾವೇರಿ ನದಿಯ ತವರೂರಿನಲ್ಲಿ ಟಿಪ್ಪು ಜಯಂತಿಗೆ ಅವಕಾಶ ನೀಡುವುದಿಲ್ಲ’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ ಹೇಳಿದರು.

‘ಯಾರಿಗೂ ಬೇಡವಾದ ಜಯಂತಿ ಆಚರಿಸಿದರೆ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಒಳಗಾಗಿರುವ ಕೊಡಗಿನ ಜನರಿಗೆ ಮತ್ತಷ್ಟು ನೋವು ತರಿಸಲಿದೆ’ ಎಂದರು.

* ಟಿಪ್ಪು ಸುಲ್ತಾನ್‌ ಕೊಡಗು ಜಿಲ್ಲೆಯ ಮೇಲೆ ದಾಳಿ ನಡೆಸಿದ್ದ. ಹಿಂದೂಗಳ ಕಗ್ಗೊಲೆಯ ಜತೆಗೆ ದೇವಸ್ಥಾನಗಳನ್ನೂ ಧ್ವಂಸಗೊಳಿಸಿದ್ದ.

- ಅಭಿಮನ್ಯು ಕುಮಾರ್‌, ಸಂಚಾಲಕ, ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.