ADVERTISEMENT

ಟಿಪ್ಪು ಜನ್ಮದಿನ ಬದಲು: ಹೊಸ ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 19:31 IST
Last Updated 17 ಜುಲೈ 2021, 19:31 IST
ಟಿಪ್ಪು ಸುಲ್ತಾನ್
ಟಿಪ್ಪು ಸುಲ್ತಾನ್   

ಶಿವಮೊಗ್ಗ: ನಿರಂತರ ಸಂಶೋಧನೆಯ ಫಲವಾಗಿ ಟಿಪ್ಪು ಸುಲ್ತಾನ್ ಜನ್ಮದಿನ 1 ಡಿಸೆಂಬರ್ 1751 ಎನ್ನುವುದು ದೃಢಪಟ್ಟಿದೆ ಎಂದು ಇತಿಹಾಸ ತಜ್ಞ, ಸಂಶೋಧಕ ನಿಧಿನ್ ಓಲಿಕಾರ್‌ ಹೇಳಿದರು.

‘ಇದುವರೆಗೂ ಟಿಪ್ಪು ಜನ್ಮದಿನ 20ನವೆಂಬರ್ 1750 ಎಂದು ನಂಬಲಾಗಿದೆ. ನಿಖರವಾದ ಸತ್ಯ ತಿಳಿಯಲು ಹಲವು ವರ್ಷಗಳ ಕಾಲ ಸಂಶೋಧನೆ ಮಾಡಿದ್ದೇನೆ. ಲಂಡನ್‍ ಮ್ಯೂಸಿಯಂನ ಅಧಿಕೃತ ಪತ್ರಗಳ ಸಮಗ್ರ ಅಧ್ಯಯನ ನಡೆಸಿರುವೆ. ಪ್ರಮುಖ ಮೂರು ದಾಖಲೆ ಸಲ್ಲಿಸಿದ್ದೇನೆ. ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಇತಿಹಾಸಜ್ಞ ಪ್ರೊ.ಶೇಖ್‍ ಅಲಿ ಅವರು ಅನುಮೋದಿಸಿದ್ದಾರೆ. ಅಧ್ಯಯನದ ಸಂಪೂರ್ಣ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಟಿಪ್ಪು ಜನ್ಮದಿನ 1 ಡಿಸೆಂಬರ್ 1751 ಆಗಬೇಕು ಎಂದು ಮನವಿ ಮಾಡಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನಿಧಿನ್ ಅವರು ಲಂಡನ್‍ಗೆ ತೆರಳಿದಾಗ ಅಲ್ಲಿನ ಬ್ರಿಟಿಷ್ ಗ್ರಂಥಾಲಯದಲ್ಲಿ ಟಿಪ್ಪುಗೆ ಸಂಬಂಧಿಸಿದ ಪರ್ಶಿಯನ್ ಭಾಷೆಯ ‘ಫತೇ ಉಲ್ ಮುಜಾಹಿದ್ದೀನ್’ ಹಸ್ತಪ್ರತಿ ಸಿಕ್ಕಿತು. ಅದು ಸ್ವತಃ ಟಿಪ್ಪು ತಾನೇ ಬರೆಸಿದ ಕೈಪಿಡಿ. ಆ ಕೈಪಿಡಿಯಲ್ಲಿ ಜಕ್ರಿ ಮಾಸದ 14ನೇ ದಿನ 1165 ಇಜ್ರಿ ದಿನ ಸೂರ್ಯೋದಯವಾದ 10 ಗಂಟೆಗಳ ನಂತರ ನನ್ನ ಜನ್ಮದಿನ ಆಚರಿಸಬೇಕು. ಮೈಸೂರು ಸಂಸ್ಥಾನದ ಸಮಸ್ತ ಪ್ರಜೆಗಳು ಸಂಭ್ರಮದಲ್ಲಿ ಭಾಗವಹಿಸಬೇಕು ಎಂಬ ಉಲ್ಲೇಖವಿದೆ. ಈ ಆಧಾರದ ಮೇಲೆಆಂಗ್ಲ ಕ್ಯಾಲೆಂಡರ್‌ಗೆ ಬದಲಾಯಿಸಿಕೊಂಡು ಅಧ್ಯಯನ ನಡೆಸಲಾಗಿದೆ. ಕೆಲವು ಹಸ್ತ ಪ್ರತಿಗಳಲ್ಲೂ ಜನ್ಮದಿನದ ಸುಳಿವು ದೊರೆತಿದೆ’ ಎಂದು ಇತಿಹಾಸಕಾರ ಖಂಡೋಬ ರಾವ್ ವಿವರ ನೀಡಿದರು.

ADVERTISEMENT

***

ಟಿಪ್ಪು ಸುಲ್ತಾನ್ ಜನ್ಮದಿನದ ಕುರಿತ ನಿಧಿನ್ ಓಲಿಕಾರ್‌ ಅವರ ಸಂಶೋಧನೆಯು ಸರಿಯಾಗಿದೆ. ಆಕರಗಳು ಅದಕ್ಕೆ ಪೂರಕವಾಗಿಯೇ ಇವೆ.

– ಪ್ರೊ.ಶೇಖ್‍ ಅಲಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.