ADVERTISEMENT

ತಿರುಮಲ: ಐಹೊಳೆ ಬ್ಲಾಕ್‌ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 14:30 IST
Last Updated 21 ಜನವರಿ 2025, 14:30 IST
ತಿರುಮಲದಲ್ಲಿನ ಕರ್ನಾಟಕ ಛತ್ರದ ‘ಐಹೊಳೆ ಬ್ಲಾಕ್‌’
ತಿರುಮಲದಲ್ಲಿನ ಕರ್ನಾಟಕ ಛತ್ರದ ‘ಐಹೊಳೆ ಬ್ಲಾಕ್‌’   

ಬೆಂಗಳೂರು: ತಿರುಮಲದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ರಾಜ್ಯ ಛತ್ರದ ‘ಐಹೊಳೆ ಬ್ಲಾಕ್‌’ ಅನ್ನು ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆ ಮಾಡಿದರು.

ವಸತಿ ಸಂಕೀರ್ಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ರಾಮಲಿಂಗಾರೆಡ್ಡಿ, ‘ವೆಂಕಟೇಶ್ವರಸ್ವಾಮಿಯ ದರ್ಶನಕ್ಕಾಗಿ ತಿರುಮಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ₹200 ಕೋಟಿ ವೆಚ್ಚದಲ್ಲಿ ಮೂರು ವಸತಿ ಸಂಕೀರ್ಣ, ಸುಸಜ್ಜಿತ ಕಲ್ಯಾಣ ಮಂಟಪ ಮತ್ತು ಹಾಲಿ ಪ್ರವಾಸಿಸೌಧದ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿದೆ’ ಎಂದು ಮಾಹಿತಿ ನೀಡಿದರು.

‘ಕರ್ನಾಟಕ ಛತ್ರದ ಹಂಪಿ ಬ್ಲಾಕ್‌ ಈಗಾಗಲೇ ಲೋಕಾರ್ಪಣೆಯಾಗಿದ್ದು, 110 ಹವಾನಿಯಂತ್ರಿತ ಕೊಠಡಿಗಳನ್ನು ಹೊಂದಿದೆ. ಈಗ 132 ಹವಾನಿಯಂತ್ರಿತ ಕೊಠಡಿ ಹೊಂದಿರುವ ಐಹೊಳೆ ಬ್ಲಾಕ್‌ ಸಹ ರಾಜ್ಯದ ಜನರ ಸೇವೆಗೆ ಸನ್ನದ್ಧವಾಗಿದೆ’ ಎಂದರು.

ADVERTISEMENT

‘36 ಸೂಟ್‌ಗಳನ್ನು ಹೊಂದಿರುವ ಶ್ರೀಕೃಷ್ಣದೇವರಾಯ ಬ್ಲಾಕ್ ಮತ್ತು 500 ಆಸನಗಳ ಸಾಮರ್ಥ್ಯ ಸುಸಜ್ಜಿತ ಕಲ್ಯಾಣ ಮಂಟಪ– ಶ್ರೀ ಕೃಷ್ಣರಾಜ ಒಡೆಯರ್ ಬ್ಲಾಕ್‌ಗಳ ನಿರ್ಮಾಣ ಕಾಮಗಾರಿ ಮುಗಿದಿದ್ದು, ಅಂತಿಮ ಸ್ಪರ್ಶದ ಕೆಲಸಗಳು ನಡೆಯುತ್ತಿವೆ. ಏಪ್ರಿಲ್‌ ಅಥವಾ ಮೇ ವೇಳೆಗೆ ಸಿದ್ಧವಾಗಲಿವೆ’ ಎಂದರು.

- * ಐಹೊಳೆ ಬ್ಲಾಕ್‌ನಲ್ಲಿನ ಪ್ರತಿ ಕೊಠಡಿಗೆ 24 ಗಂಟೆಗಳ ಅವಧಿಗೆ ₹1350 ಮತ್ತು ಜಿಎಸ್‌ಟಿ ನಿರ್ವಹಣಾ ಶುಲ್ಕ ನಿಗದಿ

* Karnatakatemplesaccommodation.com ಜಾಲತಾಣದ ಮೂಲಕ ವಸತಿ ಕಾಯ್ದಿರಿಸಬಹುದಾಗಿದೆ

* ಆನ್‌ಲೈನ್‌ನಲ್ಲಿ ಶೇ 60ರಷ್ಟು ಕೊಠಡಿಗಳು ಮತ್ತು ಆಫ್‌ಲೈನ್‌ನಲ್ಲಿ ಶೇ 40ರಷ್ಟು ಕೊಠಡಿಗಳನನ್ನು ಕಾಯ್ದಿರಿಸಲು ಮಿತಿ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.