ADVERTISEMENT

ತಂಬಾಕು ಉತ್ಪನ್ನ ಕಂಪನಿಗಳಿಗೆ ನಿಯಂತ್ರಣ: ನಿಯಮ ಜಾರಿ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:00 IST
Last Updated 13 ಮೇ 2019, 20:00 IST
   

ಬೆಂಗಳೂರು: ರಾಜ್ಯ ಸರ್ಕಾರದ ಅಧಿಕಾರಿಗಳು ತಂಬಾಕು ಉತ್ಪನ್ನಗಳ ಕಂಪನಿಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳದಂತೆ ಕಟ್ಟಪ್ಪಣೆ ಮಾಡಿದೆ.

ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆಯೊಂದನ್ನು ಹೊರಡಿಸಿದೆ. ಭಾರತ ಸರ್ಕಾರ 2004 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ತಂಬಾಕು ನಿಯಂತ್ರಣ ನಿಯಮಾವಳಿಗೆ ಸಹಿ ಮಾಡಿದೆ. ಇದರ ಅನ್ವಯ ರಾಜ್ಯ ಆರೋಗ್ಯ ಇಲಾಖೆ ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್ಒ) ನಿಯಮಾವಳಿ ಜಾರಿ ಮಾಡಿದೆ.

ಅಧಿಕಾರಿಗಳಿಗೆ ನಿಯಮದ ಬೇಲಿ: ಸರ್ಕಾರಿ ಅಧಿಕಾರಿಗಳು ತಂಬಾಕು ಉತ್ಪನ್ನಗಳ ಕಂಪನಿಗಳ ಮಾಲೀಕರು ಅಥವಾ ಅದರ ಪ್ರತಿನಿಧಿಗಳ ಜತೆಗೆ ಅನಗತ್ಯವಾಗಿ ಭೇಟಿ ಮಾಡುವಂತಿಲ್ಲ. ಒಂದು ಮಿತಿಯಲ್ಲಿ ಚರ್ಚೆಯನ್ನು ನಡೆಸಬಹುದು.

ADVERTISEMENT

ತಂಬಾಕು ಉತ್ಪನ್ನಗಳ ಕಂಪನಿಗಳ ಮಾಲೀಕರು ಅಥವಾ ಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಬೇಕಾದರೆ, ಭೇಟಿಗೆ ಮೊದಲು ರಾಜ್ಯ ನಿಯಮಾವಳಿ ಸಮಿತಿಯ ನಿಯೋಜಿತ ಅಧಿಕಾರಿಯಾಗಿರುವ ಆರೋಗ್ಯ ಇಲಾಖೆ ಆಯುಕ್ತರಿಗೆ ಮೊದಲೇ ಇ–ಮೇಲ್ ಮೂಲಕ ಭೇಟಿಯ ಉದ್ದೇಶ ತಿಳಿಸಬೇಕು. ಒಂದು ವೇಳೆ ನಿಯೋಜಿತ ಅಧಿಕಾರಿ ಭೇಟಿಗೆ ಅವಕಾಶ ನೀಡಿದರೆ, ನಿರ್ಧಾರಿತ ವಿಷಯ ಸೂಚಿಯ ಬಗ್ಗೆಯೇ ಚರ್ಚೆ ಮಾಡಬೇಕು. ಸಭೆ ನಡೆಸಿದ ಬಳಿಕ ನಡಾವಳಿಗಳನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಬೇಕು.

ಸರ್ಕಾರಿ ಅಧಿಕಾರಿಗಳು ತಂಬಾಕು ಉತ್ಪನ್ನ ಕಂಪನಿಗಳಿಂದ ಯಾವುದೇ ರೀತಿಯ ಅನುದಾನ (ಹಣ ಮತ್ತು ವಸ್ತುಗಳು) ಪಡೆಯುವಂತಿಲ್ಲ ಮತ್ತು ಸಹಭಾಗಿತ್ವ ಮಾಡಿಕೊಳ್ಳುವಂತಿಲ್ಲ.

ಎಲ್ಲ ಸರ್ಕಾರಿ ಕಚೇರಿಗಳಲ್ಲೂ ರಾಜ್ಯ ನಿಯಮಾವಳಿಯ ನಾಮಫಲಕವನ್ನು ಅಳವಡಿಸಬೇಕು. ನಿಯಮಾವಳಿ ಉಲ್ಲಂಘನೆ ಮಾಡಿದರೆ, ಆಡಳಿತಾತ್ಮಕ ದಂಡವನ್ನು ವಿಧಿಸಲು ಅವಕಾಶವಿದೆ.

ಪಂಜಾಬ್‌, ಮಿಜೋರಾಮ್‌, ಬಿಹಾರ, ತಮಿಳುನಾಡು, ಚಂಡೀಗಢ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಜಮ್ಮು–ಕಾಶ್ಮೀರ ಈ ನಿಯಮಾವಳಿ ಜಾರಿಗೆ ತಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.