ADVERTISEMENT

ಕನ್ನಡ ವಿ.ವಿ. ಕುಲಪತಿ ಅಧಿಕಾರ ಇಂದು ಕೊನೆ; ಹೊಸಬರು ಬರುತ್ತಾರೋ? ಹಳಬರೇ..?

ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಸೆಪ್ಟೆಂಬರ್ 2018, 9:21 IST
Last Updated 7 ಸೆಪ್ಟೆಂಬರ್ 2018, 9:21 IST
ಹಂಪಿ ಕನ್ನಡ ವಿ.ವಿ. ಪರಿಸರ
ಹಂಪಿ ಕನ್ನಡ ವಿ.ವಿ. ಪರಿಸರ   

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರ ಅಧಿಕಾರದ ಅವಧಿ ಇಂದು (ಸೆ.8) ಕೊನೆಗೊಳ್ಳಲಿದೆ.

ಇನ್ನೂ ಒಂದು ವರ್ಷದ ಅವಧಿಗೆ ಕುಲಪತಿ ಹುದ್ದೆಯಲ್ಲಿ ಮುಂದುವರಿಸುವಂತೆ ಮಲ್ಲಿಕಾ ಘಂಟಿ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದು ತಿಳಿದು ಬಂದಿದೆ. ಆದರೆ, ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರ ಹಾಲಿ ಕುಲಪತಿಯನ್ನೇ ಇನ್ನೊಂದು ವರ್ಷದ ಅವಧಿಗೆ ಮುಂದುವರಿಸುತ್ತೋ ಅಥವಾ ಹೊಸಬರ ನೇಮಕ ಮಾಡುತ್ತೋ ಕಾದು ನೋಡಬೇಕಿದೆ.

2015ರ ಸೆಪ್ಟೆಂಬರ್‌ 9ರಂದು ಮಲ್ಲಿಕಾ ಘಂಟಿ, ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಮೂರು ವರ್ಷಗಳ ಅಧಿಕಾರದ ಅವಧಿ ಹಲವು ಏಳು–ಬೀಳುಗಳನ್ನು ಕಂಡಿದೆ. ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಶ್ರಮ ವಹಿಸಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಆಡಳಿತ ಕಚೇರಿ, ಮಂಟಪ ಸಭಾಂಗಣ, ಭುವನ ವಿಜಯ ಸಭಾಂಗಣ ನವೀಕರಣ, ತರಗತಿಗಳ ನುಡಿ ಕಟ್ಟಡ ಸಂಕೀರ್ಣ, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಸತಿ ನಿಲಯ ಕಟ್ಟಡ ನಿರ್ಮಾಣ, ಬೆಳ್ಳಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ಕೊಡಿಸಿದ್ದಾರೆ. ವಿ.ವಿ. ಆರಂಭಗೊಂಡ 25 ವರ್ಷಗಳ ಬಳಿಕ ಬೋಧಕ ಸಿಬ್ಬಂದಿ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ADVERTISEMENT

ಖಾದಿಯನ್ನು ಪ್ರಚುರಪಡಿಸಲು ಕ್ರಮ ಕೈಗೊಂಡಿದ್ದಾರೆ. ಪ್ರತಿ ಮಂಗಳವಾರ ವಿ.ವಿ. ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಖಾದಿ ವಸ್ತ್ರ ಧರಿಸಿಕೊಂಡು ಬರುವುದು ಕಡ್ಡಾಯಗೊಳಿಸಿದ್ದಾರೆ. ಅಷ್ಟೇ ಅಲ್ಲ, ಎಲ್ಲ ವಿಭಾಗಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿದ್ದಾರೆ. ಆಡಳಿತಕ್ಕೆ ಚುರುಕು ಮುಟ್ಟಿಸಿ, ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಿಸಲು ಶ್ರಮಿಸಿದ್ದಾರೆ.

ವಿ.ವಿ. ಕಟ್ಟಿ ಬೆಳೆಸಲು ಶ್ರಮಿಸಿದ ವಿಶ್ರಾಂತ ಕುಲಪತಿಗಳು, ಕುಲಸಚಿವರು, ನಾಡಿನ ಸಾಹಿತಿಗಳನ್ನು ಬೆಳ್ಳಿ ಹಬ್ಬ ಸಮಾರಂಭಕ್ಕೆ ಕರೆಸಿ ಗೌರವಿಸಿದ್ದಾರೆ. ಅನೇಕ ಜನ ವಿದ್ವಾಂಸರನ್ನು ಕರೆಸಿ, ಚರ್ಚಾಗೋಷ್ಠಿ, ಚಿಂತನ–ಮಂಥನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ ವ್ಯಾಪ್ತಿಗೆ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸಲು ಸರ್ಕಾರ ಮುಂದಾದಾಗ, ಅದನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿದರು. ಸ್ವತಃ ತಾವೇ ನೇತೃತ್ವ ವಹಿಸಿ ಅದರ ವಿರುದ್ಧ ಚಳವಳಿ ಮಾಡಿದರು. ಅಂತಿಮವಾಗಿ ಸರ್ಕಾರ ತನ್ನ ನಿರ್ಧಾರ ಬದಲಿಸಬೇಕಾಯಿತು. ಇದರಿಂದಾಗಿ ಕನ್ನಡ ವಿ.ವಿ. ತನ್ನ ಅಸ್ಮಿತೆ ಉಳಿಸಿಕೊಳ್ಳುವಂತಾಯಿತು.

ಮೊದಲ ಕುಲಪತಿ ಚಂದ್ರಶೇಖರ ಕಂಬಾರ ಅವರು ವಿ.ವಿ.ಗೆ ಮೂರ್ತ ಸ್ವರೂಪ ನೀಡಿದರೆ, ಡಾ.ಎಂ.ಎಂ. ಕಲಬುರ್ಗಿ ಅವರು ಅಕಾಡೆಮಿಕ್‌ ಕೆಲಸಗಳ ಮೂಲಕ ಅದರ ಕೀರ್ತಿ ಎಲ್ಲೆಡೆ ಹರಡುವಂತೆ ನೋಡಿಕೊಂಡರು. ಅನೇಕ ಜನ ಹೊಸ ವಿದ್ವಾಂಸರನ್ನು ಹುಟ್ಟು ಹಾಕಿದರು. ಉತ್ಕೃಷ್ಟವಾದ ಪುಸ್ತಕಗಳು ಹೊರಬರಲು ಶ್ರಮಿಸಿದರು. ಮಲ್ಲಿಕಾ ಘಂಟಿ ಅವರು ವಿ.ವಿ.ಯಲ್ಲಿ ಮೂಲಸೌಕರ್ಯ ಹೆಚ್ಚಿಸಿ ಅದು ಇನ್ನಷ್ಟು ಬೆಳೆಯುವಂತೆ ಮಾಡಿದರು. ವಿ.ವಿ. ಇದುವರೆಗೆ ಒಟ್ಟು ಎಂಟು ಜನ ಕುಲಪತಿಗಳನ್ನು ಕಂಡಿದ್ದು, ಮೊದಲ ಮಹಿಳಾ ಕುಲಪತಿ ಎಂಬ ಹಿರಿಮೆ ಘಂಟಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.