ADVERTISEMENT

ಲಕ್ಕುಂಡಿಗೆ ಪಾರಂಪರಿಕ ಪ್ರವಾಸೋದ್ಯಮ ಮುಂಚೂಣಿಗೆ ಸರ್ವ ಯತ್ನ: ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 16:15 IST
Last Updated 14 ಅಕ್ಟೋಬರ್ 2025, 16:15 IST
<div class="paragraphs"><p>ಎಚ್‌.ಕೆ.ಪಾಟೀಲ</p></div>

ಎಚ್‌.ಕೆ.ಪಾಟೀಲ

   

ಬೆಂಗಳೂರು: ‘ಗದಗ ಜಿಲ್ಲೆ ಲಕ್ಕುಂಡಿಗೆ ಯುನೆಸ್ಕೊ ಜಾಗತಿಕ ಪಾರಂಪರಿಕ ತಾಣದ ಸ್ಥಾನಮಾನ ದೊರಕಿಸಲು ಪ್ರಯತ್ನ ನಡೆಸಿದ್ದು, ಈ ಮೂಲಕ ಕರ್ನಾಟಕ ಪಾರಂಪರಿಕ ಪ್ರವಾಸೋದ್ಯಮ ಮುಂಚೂಣಿ ರಾಜ್ಯವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದೇವೆ’ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ರಾಜಸ್ಥಾನದ ಉದಯಪುರದಲ್ಲಿ ಪ್ರವಾಸೋದ್ಯಮದ ಹೊಸ ಉಪಕ್ರಮಗಳ ಬಗ್ಗೆ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ADVERTISEMENT

ಜಾಗತಿಕ ಸ್ಪರ್ಧಾತ್ಮಕ ಪ್ರವಾಸೋದ್ಯಮದ 50 ತಾಣಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಿಷನ್ ಅಡಿ ಕರ್ನಾಟಕ ಸರ್ಕಾರವು ಗದಗ, ಹಂಪಿ, ಮೈಸೂರು ಮತ್ತು ಉಡುಪಿಯನ್ನು ಭವಿಷ್ಯೋತ್ತರದ ಜಾಗತಿಕ ತಾಣಗಳೆಂದು ಪರಿಗಣಿಸಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಗದಗದಿಂದ 8 ಕಿ.ಮೀ. ದೂರದಲ್ಲಿರುವ ಲಕ್ಕುಂಡಿಯು ಚಾಲುಕ್ಯರ ಶಿಲ್ಪಕಲೆಯ ಬಯಲು ವಸ್ತು ಸಂಗ್ರಹಾಲಯವೆಂದು ಕರೆಯಲ್ಪಡುತ್ತದೆ. 100 ಗಹನವಾದ ಕೆತ್ತನೆಯ ದೇವಾಲಯಗಳು, ಆಳವಾದ ಬಾವಿಗಳು, ಜೈನ ಬಸದಿಗಳು ಮತ್ತು ಪ್ರಾಚೀನ ಯುಗದ ಶಿಲ್ಪಕಲೆಯ ಚಾಣಾಕ್ಷತನವನ್ನು ಪ್ರತಿಬಿಂಬಿಸುವ ಶಿಲಾ ಶಾಸನಗಳನ್ನು ಹೊಂದಿವೆ ಎಂದು ಹೇಳಿದರು.

ಗದಗ ನಗರವು ತ್ರಿಕೂಟೇಶ್ವರ ದೇವಸ್ಥಾನ, ಸರಸ್ವತಿ ದೇವಸ್ಥಾನ ಮತ್ತು ವೀರನಾರಾಯಣ ದೇವಸ್ಥಾನ, ಡಂಬಳದ ದೊಡ್ಡ ಬಸಪ್ಪನ ದೇವಸ್ಥಾನಗಳು ಹಾಗೂ ಪ್ರಾಚೀನ ಕೋಟೆಗಳು ಭಾರತೀಯ ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿದ ರಾಜಮನೆತನಗಳ ಕಥೆಗಳನ್ನು ವರ್ಣಿಸುತ್ತವೆ ಎಂದು ಅವರು ವಿವರಿಸಿದರು.

ಭಾರತವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಕರ್ನಾಟಕ ಬದ್ಧವಾಗಿದೆ. ಕೇಂದ್ರ ಮತ್ತು ಇತರ ರಾಜ್ಯಗಳ ಸಂಯೋಜನೆಯೊಂದಿಗೆ ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮದ ಶಕ್ತಿ ಕೇಂದ್ರವನ್ನಾಗಿಸಲು ಕರ್ನಾಟಕವು ತನ್ನೆಲ್ಲ ಶಕ್ತಿಯನ್ನು ಧಾರೆ ಎರೆಯುತ್ತಿದೆ ಎಂದು ಎಚ್‌.ಕೆ.ಪಾಟೀಲ ವಿವರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೆಖಾವತ್‌ ಮತ್ತು ಎಲ್ಲ ರಾಜ್ಯಗಳ ಪ್ರವಾಸೋದ್ಯಮ ಸಚಿವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.