ADVERTISEMENT

ಲಾಕ್‌ಡೌನ್‌ ಪರಿಣಾಮ | ನೆಲ ಕಚ್ಚಿದ ಪ್ರವಾಸೋದ್ಯಮ

ಕೊರೊನಾ ಸೋಂಕು ಹರಡುತ್ತಿರುವುದು

ಎಂ.ಮಹೇಶ
Published 15 ಜುಲೈ 2020, 19:30 IST
Last Updated 15 ಜುಲೈ 2020, 19:30 IST
ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಗೋಕಾಕ ಜಲಪಾತ ವೀಕ್ಷಿಸಲು ಈಚೆಗೆ ಕೆಲವೇ ಮಂದಿಯಷ್ಟೇ ಬಂದಿದ್ದರುಪ್ರಜಾವಾಣಿ ಚಿತ್ರ
ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಗೋಕಾಕ ಜಲಪಾತ ವೀಕ್ಷಿಸಲು ಈಚೆಗೆ ಕೆಲವೇ ಮಂದಿಯಷ್ಟೇ ಬಂದಿದ್ದರುಪ್ರಜಾವಾಣಿ ಚಿತ್ರ   

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಹಾಗೂ ಲಾಕ್‌ಡೌನ್‌ ಪರಿಣಾಮ ಪ್ರವಾಸೋದ್ಯಮ ಸಂಪೂರ್ಣ ನೆಲ ಕಚ್ಚಿದೆ. ಇದನ್ನೇ ನಂಬಿದ್ದ ಹಲವು ವರ್ಗದವರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ಮಹಾರಾಷ್ಟ್ರ ಹಾಗೂ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಈ ಗಡಿ ನಾಡಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಕೊರತೆ ಇರಲಿಲ್ಲ. ಅದರಲ್ಲೂ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರು ಲಗ್ಗೆ ಇಡುವುದು ಸಾಮಾನ್ಯವಾಗಿರುತ್ತಿತ್ತು. ಇಲ್ಲಿನ ಹೆಸರಾಂತ ಜಲಪಾತಗಳು, ಕಿರು ಮೃಗಾಲಯ, ಐತಿಹಾಸಿಕ ಕೋಟೆಗಳು, ಸ್ಮಾರಕಗಳು ಹಾಗೂ ಸಹಜ ನೈಸರ್ಗಿಕ ತಾಣಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ‍ಪ್ರವಾಸಿಗರು ಬರುತ್ತಿದ್ದರು. ಆದರೆ, ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಅಂದರೆ ಹಲವು ತಿಂಗಳುಗಳಿಂದಲೂ ಪ್ರವಾಸೋದ್ಯಮ ಕ್ಷೇತ್ರ ಚಿಂತಾಜನಕ ಸ್ಥಿತಿಗೆ ತಲುಪಿದೆ. ಈ ತಾಣಗಳು ಸಂದರ್ಶಕರಿಲ್ಲದೆ ಬಿಕೋ ಎನ್ನುತ್ತಿವೆ.

ಖ್ಯಾತ ಗೋಕಾಕ ಹಾಗೂ ಗೊಡಚನಮಲ್ಕಿ ಜಲಪಾತಗಳು, ಘಟಪ್ರಭಾ ಪಕ್ಷಿದಾಮ, ಕಿತ್ತೂರು ಚನ್ನಮ್ಮನ ಕೋಟೆ, ಸವದತ್ತಿ ಮತ್ತು ರಾಮದುರ್ಗದ ಕೋಟೆ, ಹಿಡಕಲ್‌ ಜಲಾಶಯದ ಉದ್ಯಾನ, ಸೊಗಲ, ಹಲಸಿ, ಅಸೋಗ, ಬಸವಣ್ಣನ ಪತ್ನಿ ಗಂಗಾಂಬಿಕೆ ಐಕ್ಯಸ್ಥಳ, ರಾಜಹಂಸಗಡ ಸೇರಿದಂತೆ ವಿವಿಧ ಕೋಟೆ– ಕೊತ್ತಲಗಳು ಮೊದಲಾದವುಗಳನ್ನು ಸೇರಿಸಿ ಈವರೆಗೆ 41 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲಾಗಿದೆ. ಇಲ್ಲೆಲ್ಲವೂ ಚಟುವಟಿಕೆಗಳು ಇಲ್ಲದೇ ಇರುವುದರಿಂದ ವ್ಯಾಪಾರಿಗಳು, ಹೋಟೆಲ್‌ ನಡೆಸುವವರು ನಷ್ಟ ಅನುಭವಿಸುತ್ತಿದ್ದಾರೆ.

ADVERTISEMENT

ಧಾರ್ಮಿಕ ಪ್ರವಾಸೋದ್ಯಮವೂ ಇಲ್ಲ:

ಪ್ರಖ್ಯಾತ ಧಾರ್ಮಿಕ ಸ್ಥಳಗಳಾದ ಸವದತ್ತಿ ಯಲ್ಲಮ್ಮ ಹಾಗೂ ಚಿಂಚಲಿ ಮಾಯಕ್ಕದೇವಿ ದೇವಸ್ಥಾನಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ. ಇದರಿಂದ ಧಾರ್ಮಿಕ ಪ್ರವಾಸೋದ್ಯಮದ ಮೇಲೂ ಕರಿನೆರಳು ಬಿದ್ದಿದೆ. ಆ ಸ್ಥಳಗಳಲ್ಲಿದ್ದ ಸಣ್ಣಪುಟ್ಟ ಅಂಗಡಿಕಾರರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಗೋಕಾಕ ಹಾಗೂ ಗೊಡಚಿನಮಲ್ಕಿ ಜಲಪಾತ ಮೈದುಂಬಿದ್ದರೂ ಗೋಕಾಕ ತಾಲ್ಲೂಕು ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಸಂದರ್ಶಕರು ಕಡಿಮೆಯಾಗಿದ್ದಾರೆ.

ಲಾಕ್‌ಡೌನ್‌ ತೆರವಾದ ನಂತರ ಪರಿಸ್ಥಿತಿ ಕೊಂಚ ಸುಧಾರಿಸುತ್ತಿತ್ತು. ಆದರೆ, ಮತ್ತೆ ನೆರೆಯ ಧಾರವಾಡ, ಬೆಂಗಳೂರು ಹಾಗೂ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಲಾಕ್‌ಡೌನ್‌ ಜಾರಿ ಆಗಿರುವುದರಿಂದ ಪ್ರವಾಸಿ ತಾಣಗಳಲ್ಲಿನ ವಾತಾವರಣ ಮಂಕಾಗಿದೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯವರ ಜೊತೆ ಸ್ಥಳೀಯರು ಕೂಡ ಪ್ರವಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಚಿಂತಾಜನಕ ಸ್ಥಿತಿ ಇದೆ:

‘ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಪೂರ್ಣ ಶೂನ್ಯ ಸ್ಥಿತಿಗೆ ತಲುಪಿದೆ. ಅದನ್ನೇ ನಂಬಿದವರು ಪರಿಸ್ಥಿತಿ ಚಿಂತಾಜನಕವಾಗಿದೆ. ಲಾಕ್‌ಡೌನ್‌ ತೆರವಾದ ನಂತರ ಚೇತರಿಕೆಯ ಹಳಿಗೆ ಬರುತ್ತಿತ್ತು. ಆದರೆ, ಕೊರೊನಾ ಸೋಂಕು ವ್ಯಾಪಿಸುತ್ತಿರುವುದು ಮತ್ತು ಅಲ್ಲಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಮತ್ತೆ ಹಳಿಯಿಂದ ಸರಿದಿದೆ. ಎಲ್ಲವೂ ಸಹಜ ಸ್ಥಿತಿಗೆ ಬರಲು ಹಾಗೂ ಉದ್ಯಮ ಚೇತರಿಸಿಕೊಳ್ಳಲು ಅದೆಷ್ಟು ತಿಂಗಳುಗಳು ಬೇಕಾಗುತ್ತದೆಯೋ ಎನ್ನುವುದು ಗೊತ್ತಾಗುತ್ತಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜಗದೀಶಗೌಡ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕೋವಿಡ್–19 ಕಾರಣದಿಂದ 2020–2025ರ ಹೊಸ ಪ್ರವಾಸೋದ್ಯಮ ನೀತಿಯೂ ಜಾರಿಯಾಗಿಲ್ಲ. ಪರಿಣಾಮ ಯಾವುದೇ ಕಾರ್ಯಕ್ರಮ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶ ಇದೆಯಾದರೂ ಏನನ್ನೂ ಮಾಡಲಾಗದ ಸ್ಥಿತಿಯನ್ನು ಕೊರೊನಾ ತಂದೊಡ್ಡಿದೆ. ಕೆಲಸ ಇಲ್ಲದಿರುವುದರಿಂದ ಪ್ರವಾಸಿ ಗೈಡ್‌ಗಳನ್ನು ಕೂಡ ತೆಗೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.