ADVERTISEMENT

ಮೈಸೂರು: ಕಳೆಗಟ್ಟಿದ ‘ಪಾರಂಪರಿಕ ಸಂಗೀತೋತ್ಸವ'

12 ದಿನಗಳ ಉತ್ಸವಕ್ಕೆ ಕೆ.ಎನ್‌.ಶಾಂತಕುಮಾರ್‌ ಚಾಲನೆ l ವಿಶ್ವವಿದ್ಯಾಲಯ ಸ್ಥಾಪನೆಗೆ ವಾಸು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 16:21 IST
Last Updated 1 ಸೆಪ್ಟೆಂಬರ್ 2022, 16:21 IST
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಆಯೋಜಿಸಿರುವ 61ನೇ ‘ಪಾರಂಪರಿಕ ಸಂಗೀತೋತ್ಸವ'ಕ್ಕೆ ಗುರುವಾರ ‘ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌’ ನಿರ್ದೇಶಕರಾದ ಕೆ.ಎನ್‌.ಶಾಂತಕುಮಾರ್ ಚಾಲನೆ ನೀಡಿದರು. ರಮೇಶ್ ನರಸಯ್ಯ, ಸಿ.ಆರ್.ಹಿಮಾಂಶು, ವಾಸು, ಜಗನ್ನಾಥ ಶೆಣೈ ಇದ್ದರು –ಪ್ರಜಾವಾಣಿ ಚಿತ್ರ 
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಆಯೋಜಿಸಿರುವ 61ನೇ ‘ಪಾರಂಪರಿಕ ಸಂಗೀತೋತ್ಸವ'ಕ್ಕೆ ಗುರುವಾರ ‘ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌’ ನಿರ್ದೇಶಕರಾದ ಕೆ.ಎನ್‌.ಶಾಂತಕುಮಾರ್ ಚಾಲನೆ ನೀಡಿದರು. ರಮೇಶ್ ನರಸಯ್ಯ, ಸಿ.ಆರ್.ಹಿಮಾಂಶು, ವಾಸು, ಜಗನ್ನಾಥ ಶೆಣೈ ಇದ್ದರು –ಪ್ರಜಾವಾಣಿ ಚಿತ್ರ    

ಮೈಸೂರು: ನಗರದ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಆಯೋಜಿಸಿರುವ 61ನೇ ‘ಪಾರಂಪರಿಕ ಸಂಗೀತೋತ್ಸವ'ಕ್ಕೆ ಗುರುವಾರ ‘ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌’ ನಿರ್ದೇಶಕರಾದ ಕೆ.ಎನ್‌.ಶಾಂತಕುಮಾರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಕೈಗಾರಿಕೆ, ಆಡಳಿತಾತ್ಮಕ ರಾಜಧಾನಿ ಬೆಂಗಳೂರಾದರೆ, ಮೈಸೂರು ಸಾಂಸ್ಕೃತಿಕ ರಾಜಧಾನಿ. ಮೈಸೂರು ಸಂಸ್ಥಾನದ ಒಡೆಯರು ಕರ್ನಾಟಕ ಸಂಗೀತ ಹಾಗೂ ಕಲೆಗಳಿಗೆ ಪ್ರೋತ್ಸಾಹ ನೀಡಿದ್ದರು. ಆ ಪರಂಪರೆಯನ್ನುಎಸ್‌ಪಿವಿಜಿಎಂಸಿ ಟ್ರಸ್ಟ್ ಮುಂದುವರಿಸುತ್ತಿರುವುದು ಅಭಿನಂದನೀಯ’ ಎಂದರು.

‘ಯಾವುದೇ ಸಭಾಂಗಣವಿಲ್ಲದೆ, ಟಿಕೆಟ್‌ಗಳಿಲ್ಲದೆ 60 ವರ್ಷಗಳಿಂದ ಕಲಾರಸಿಕರಿಗೆ ಸಂಗೀತವನ್ನು ಟ್ರಸ್ಟ್‌ ನೀಡುತ್ತಿದೆ. ಈ ಪ್ರೋತ್ಸಾಹದಿಂದ ಬಹಳಷ್ಟು ಸಂಗೀತಗಾರರು ಹೊರಹೊಮ್ಮಿದ್ದಾರೆ’ ಎಂದು ಹೇಳಿದರು.

ADVERTISEMENT

ಮುಖಂಡ ವಾಸು ಮಾತನಾಡಿ, ‘ಸಂಗೀತ ವಿಶ್ವವಿದ್ಯಾಲಯವು ಮಾಡುವ ಕೆಲಸವನ್ನು ಟ್ರಸ್ಟ್ ಮಾಡುತ್ತಿದೆ. ಕಲಾವಿದರನ್ನು ಗುರುತಿಸಿ ವೇದಿಕೆ ಒದಗಿಸುತ್ತಿರುವ ಟ್ರಸ್ಟ್‌, ವಿಶ್ವವಿದ್ಯಾಲಯ ಸ್ಥಾಪನೆಯತ್ತ ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಸಂಗೀತ ಕಛೇರಿ ನೀಡುವಂತೆ8ನೇ ಕ್ರಾಸ್‌ನಿಂದ ಆಹ್ವಾನ ಬಂದರೆ ಅಂತರರಾಷ್ಟ್ರೀಯ ಕಲಾವಿದರು ತಪ್ಪಿಸುವುದಿಲ್ಲ. ಕಾರ್ಯಕ್ರಮ ನೀಡುವುದರ ಜೊತೆಗೆ ಪ್ರೇಕ್ಷಕರಾಗಿಯೂ ಭಾಗವಹಿಸುತ್ತಾರೆ. ಅದಕ್ಕೆ ಟ್ರಸ್ಟ್‌ ಸಂಗೀತ ಕಲಾವಿದರ ಮೇಲಿಟ್ಟಿರುವ ಕಾಳಜಿ ಕಾರಣ’ ಎಂದರು.

ಟ್ರಸ್ಟ್‌ ಅಧ್ಯಕ್ಷ ಜಗನ್ನಾಥ ಶೆಣೈ ಮಾತನಾಡಿ, ‘ರಸ– ಭಾವ ಎಲ್ಲವೂ ಸಂಗೀತದಿಂದ ಸಿಗುತ್ತದೆ.ಈ ರುಚಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಸಂಗೀತ ಪ್ರಿಯರದ್ದು. ಮಕ್ಕಳನ್ನು ಸಂಗೀತ ವಾದ್ಯ, ಗಾಯನದ ತರಗತಿಗೆ ಸೇರಿಸಬೇಕು’ ಎಂದರು.

‘ಕಲೆಗಳ ಕಲಿಕೆ ಆರಂಭದಲ್ಲಿ ಕಷ್ಟ. ಆದರೆ, ರುಚಿ– ಆನಂದ ಸಿಕ್ಕಾಗ ಮಕ್ಕಳು ಆಸಕ್ತಿ ತೋರುತ್ತಾರೆ. ಕಲೆಗಳ ಬೆಳವಣಿಗೆಯಲ್ಲಿಯೇ ಹಿರಿಯರು ಸಂತಸ ಕಾಣಬೇಕು. ಲಲಿತ ಕಲೆಗಳು, ರಸಸ್ವಾದ ನಮ್ಮ ತಲೆಮಾರಿಗೇ ಕೊನೆಯಾಗಬಾರದು ಅಲ್ಲವೇ’ ಎಂದು ಪ್ರಶ್ನಿಸಿದರು.

‘ಜನರ ಸಹಕಾರದಿಂದಲೇ ಬಹುದೊಡ್ಡ ಉತ್ಸವ ನಡೆಯುತ್ತಿದೆ. ಬರೀ ವಯಸ್ಸಾದವರಷ್ಟೆ ಅಲ್ಲದೇ ಯುವಕರು ಟ್ರಸ್ಟ್ ನಡೆಸಲು ಮುಂದಾಗಬೇಕು’ ಎಂದು ಕರೆ ನೀಡಿದರು.

ಮುಖ್ಯಮಂತ್ರಿ ತೆರಿಗೆ ಸೇವಾ 2021–22ರ ಪ್ರಶಸ್ತಿ ಪುರಸ್ಕೃತರಾದ, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ರಮೇಶ್‌ ನರಸಯ್ಯ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ ಕಾರ್ಯದರ್ಶಿ ಸಿ.ಆರ್‌.ಹಿಮಾಂಶು ಇದ್ದರು.

ಅಕ್ಕರೈ ಸಹೋದರಿಯರ ವಯಲಿನ್ ಮೋಡಿ!:ವಿದುಷಿ ಅಕ್ಕರೈ ಶುಭಲಕ್ಷ್ಮಿ, ವಿದುಷಿ ಅಕ್ಕರೈ ಸ್ವರ್ಣಲತಾ ಸಹೋದರಿಯರ ‘ದಂದ್ವ ವಯಲಿನ್‌’ ವಾದನವು ಕೇಳುಗರನ್ನು ಮೋಡಿ ಮಾಡಿತು.

ತ್ಯಾಗರಾಜ, ಪುರಂದರ ದಾಸರ ಕೃತಿಗಳನ್ನುಕಾನಡ, ನಾಟ,ಗೌಳ,ಆನಂದ ಭೈರವಿ,ನಳಿನಕಾಂತಿ ರಾಗಗಳಲ್ಲಿ ಪ್ರಸ್ತುತಪಡಿಸಿದರು.ನಳಿನಕಾಂತಿ ರಾಗದಲ್ಲಿ ‘ಮನವ್ಯಾಲಕಿಂ’, ‘ನಾಟ್ಟಲಿ ಜಯ ಜಾನಕಿ ಕಾಂತ’, ಗೌಳ ರಾಗದಲಿ ‘ದುಡುಕುಗಲ’ ಕೃತಿಗಳನ್ನು ನುಡಿಸಿದರು.

‘ಖರಹರಪ್ರಿಯ’ ರಾಗದಲ್ಲಿ ನುಡಿಸಿದ ಜಂಟಿವರಸೆ ತಲೆದೂಗಿಸಿತು. ಇದೇ ರಾಗದ ತ್ಯಾಗರಾಜರಕೃತಿ ‘ರಾಗ ತಾನ ಪಲ್ಲವಿ ಗುಹೇಶ್ವರಂ ಗಣೇಶ್ವರಂ’ ಜೊತೆ ಬಿಂದುಮಾಲಿನಿ ರಾಗದ ‘ಎಂತ ಮುದ್ದೋ ಎಂತ ಸೊಗಸೊ’ ನಡೆಗಳು ಭಾವ‍ಪರವಶರನ್ನಾಗಿಸಿತು.

ವಿದ್ವಾನ್‌ ಕೆ.ಯು.ಜಯಚಂದ್ರರಾವ್‌– ಮೃದಂಗ, ವಿದ್ವಾನ್‌ ವಾಳೈಪಲ್ಲಿ ಕೃಷ್ಣಕುಮಾರ್‌– ಘಟಂನಲ್ಲಿ ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.