ADVERTISEMENT

ಶಿಕ್ಷಕರ ವರ್ಗಾವಣೆ: ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 20:00 IST
Last Updated 24 ನವೆಂಬರ್ 2021, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಪರಿಷ್ಕೃತ ಆದೇಶ ಹೊರಡಿಸಿದ ಬೆನ್ನಲ್ಲೇ, ಸ್ಥಳ ಆಯ್ಕೆಗಾಗಿ ನ.24ರಿಂದ ನಡೆಯಬೇಕಿದ್ದ ಕೌನ್ಸೆಲಿಂಗ್ ಅನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ತಾಲ್ಲೂಕಿನಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಅದರಲ್ಲಿ ಶೇ 25ರಷ್ಟು ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆ ಮುಂದಾಗಿತ್ತು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘ, ತಾಲ್ಲೂಕಿಗೆ ಒಟ್ಟು ಮಂಜೂರಾದ ಹುದ್ದೆಗಳಲ್ಲಿ ಶೇ 25ರಷ್ಟು ಹುದ್ದೆಗಳಿಗೆ ವರ್ಗಾವಣೆ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿತ್ತು.

‘ತಾಲ್ಲೂಕಿಗೆ ಮಂಜೂರಾದ ಒಟ್ಟು ಶಿಕ್ಷಕರ ಹುದ್ದೆಗಳ ಪೈಕಿ ಶೇ 25ರಷ್ಟು ಹುದ್ದೆಗಳಿಗೆ ವರ್ಗಾವಣೆ ನೀಡಬೇಕು ಮತ್ತು ತಾಲ್ಲೂಕಿನೊಳಗೆ ಶೇ 25ರಷ್ಟು ವರ್ಗಾವಣೆ ಮಾಡಲು ಮೊದಲ ಆದ್ಯತೆ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು. ಶಿಕ್ಷಣ ಸಚಿವರು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ.

ADVERTISEMENT

ಪರಿಷ್ಕೃತ ಆದೇಶ ಹೊರಡಿಸಿರುವ ಸರ್ಕಾರ, ‘ಯಾವುದೇ ಘಟಕದಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆಯ ಆಧಾರದಲ್ಲಿ ಶೇಕಡಾವಾರು ಮಿತಿ ಲೆಕ್ಕಾಚಾರ ಮಾಡಬೇಕು’ ಎಂದು ಸೂಚಿಸಿದೆ. ಅಂದರೆ, ಒಂದು ತಾಲ್ಲೂಕಿಗೆ ಎಷ್ಟು ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ ಎಂಬುದನ್ನು ಪರಿಗಣಿಸಿ, ಅದರಲ್ಲಿ ಶೇ 25ರಷ್ಟು ಹುದ್ದೆಗಳಿಗೆ ವರ್ಗಾವಣೆ ಪ್ರಕ್ರಿಯೆ ನಡೆಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.