ADVERTISEMENT

ಮತ್ತೊಮ್ಮೆ ಅಂತರ ನಿಗಮ ವರ್ಗಾವಣೆ

ಪರಿಶೀಲನೆ ನಡೆಸಲು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸೂಚನೆ l ಸಾಧಕ–ಬಾಧಕ ಅಧ್ಯಯನ ಆರಂಭ

ವಿಜಯಕುಮಾರ್ ಎಸ್.ಕೆ.
Published 5 ಜುಲೈ 2019, 19:49 IST
Last Updated 5 ಜುಲೈ 2019, 19:49 IST

ಬೆಂಗಳೂರು:ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಅಂತರ ನಿಗಮ ವರ್ಗಾವಣೆಯನ್ನು ಮತ್ತೊಮ್ಮೆ ನಡೆಸಲು ಸರ್ಕಾರ ಚಿಂತನೆ ನಡೆಸಿದ್ದು, ಸಾಧಕ–ಬಾಧಕಗಳ ಬಗ್ಗೆ ಅಧ್ಯಯನ ಆರಂಭವಾಗಿದೆ.

ನೌಕರರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತರ ನಿಗಮ ವರ್ಗಾವಣೆಯ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ), ವಾಯವ್ಯ ಸಾರಿಗೆ ಸಂಸ್ಥೆಯ ಎನ್‌ಡಬ್ಲ್ಯುಕೆಆರ್‌ಟಿಸಿ)ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಸಚಿವರ ಆದೇಶದಂತೆ ಅಧಿಕಾರಿಗಳು ಅಧ್ಯಯನ ಆರಂಭಿಸಿದ್ದಾರೆ. ಬಿಎಂಟಿಸಿ ನೌಕರರೇಹೆಚ್ಚಿನ ಸಂಖ್ಯೆಯಲ್ಲಿ ಇತರ ನಿಗಮಗಳಿಗೆ ವರ್ಗಾವಣೆ ಬಯಸುವ ಸಾಧ್ಯತೆ ಇದೆ. ಅಷ್ಟು ಜನರಿಗೆ ಬೇರೆ–ಬೇರೆ ನಿಗಮಗಳಲ್ಲಿ ಅವಕಾಶ ಕಲ್ಪಿಸಲು ಹುದ್ದೆಗಳು ಖಾಲಿ ಆಗಲಿವೆಯೇ?, ನೌಕರರು ವರ್ಗಾವಣೆಯಾಗಿ ಹೋದರೆ ಬಿಎಂಟಿಸಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುವುದು ಹೇಗೆ? ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ‘371 ಜೆ’ ಕಾಯ್ದೆ ಜಾರಿಯಲ್ಲಿದೆ. ಇದರ ನಡುವೆ ವರ್ಗಾವಣೆ ಪ್ರಕ್ರಿಯೆಗಳನ್ನು ನಡೆಸುವುದು ಹೇಗೆ? ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟಾರೆ ಕಾರ್ಯಸಾಧ್ಯತೆ ಸಂಬಂಧ ನಾಲ್ಕು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಒಟ್ಟಿಗೆ ಕುಳಿತು ಚರ್ಚೆ ನಡೆಸಲಿದ್ದಾರೆ ಎಂದು ಕೆಎಸ್ಆರ್‌ಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2017ರಲ್ಲಿ ಮೊದಲ ಬಾರಿಗೆ ಒಂದು ಬಾರಿಗೆ ಅಂತರ ನಿಗಮ ವರ್ಗಾವಣೆಗೆ ಸರ್ಕಾರ ಅವಕಾಶ ಕಲ್ಪಿಸಿತ್ತು. ನೌಕರರ ಸಂಘಟನೆಗಳು ಸತತ ಹೋರಾಟ ನಡೆಸಿದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆಗಲೂ, ನಾಲ್ಕು ನಿಗಮಗಳಿಂದ ವರ್ಗಾವಣೆಯಾದ ಒಟ್ಟು 3,718 ನೌಕರರಲ್ಲಿ ಬಿಎಂಟಿಸಿಯ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ (2,400 ಸಿಬ್ಬಂದಿ) ವರ್ಗಾವಣೆಯಾಗಿದ್ದರು.

ಎಲ್ಲರನ್ನೂ ಬಿಡುಗಡೆ ಮಾಡಿದರೆ ಬಸ್‌ಗಳ ಕಾರ್ಯಾಚರಣೆ ಕಷ್ಟವಾಗಲಿದೆ ಎಂಬ ಕಾರಣಕ್ಕೆ ನೌಕರರನ್ನು ಬಿಡುಗಡೆ ಮಾಡಲು ಬಿಎಂಟಿಸಿ ವಿಳಂಬ ಮಾಡಿತ್ತು. ಬಿಎಂಟಿಸಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಲ್ಲಿ ಬಹುತೇಕರು ಬೇರೆ–ಬೇರೆ ಜಿಲ್ಲೆಯವರೇ ಆಗಿದ್ದಾರೆ. ಅಂತರ ನಿಗಮ ವರ್ಗಾವಣೆಗೆ ಅವಕಾಶ ಸಿಕ್ಕರೆ ತಮ್ಮ ತಮ್ಮ ಊರುಗಳಿಗೆ ಹೋಗಲು ನೌಕರರು ಈಗಲೂ ತುದಿಗಾಲಲ್ಲಿ ನಿಂತಿದ್ದಾರೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.