ADVERTISEMENT

ನೌಕರರ ತೀವ್ರ ಪ್ರತಿಭಟನೆ– 8 ದಿನದಲ್ಲಿ ಸಾರಿಗೆ ಇಲಾಖೆಗೆ ₹152 ಕೋಟಿ ಆದಾಯ ನಷ್ಟ

ಸರ್ಕಾರದ ಕ್ರಮ ಕಠಿಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 19:31 IST
Last Updated 14 ಏಪ್ರಿಲ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಾದ್ಯಂತ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದ್ದು, ಎಂಟನೇ ದಿನವೂ ಸಾವಿರಾರು ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಹೋರಾಟ ತೀವ್ರಗೊಳಿಸಿದರು. ಭಿಕ್ಷಾಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕೂಡ ಪಟ್ಟು ಸಡಿಲಿಸದೆ ಕಠಿಣ ಕ್ರಮಗಳಿಗೆ ಮುಂದಾಗಿದೆ. ಅಮಾನತು, ವಜಾ, ವರ್ಗಾವಣೆ ಹಾಗೂ ನಿವೃತ್ತಿ ನೀಡುವ ಪ್ರಕ್ರಿಯೆಯನ್ನು ಮುಂದುವರಿಸಿದೆ. ಮುಷ್ಕರಕ್ಕೆೆ ಕರೆ ನೀಡಿದ ಸಂಘಟನೆ ಹೊರತಾದ ಉಳಿದ ಸಂಘಗಳನ್ನು ವಿಶ್ವಾಸಕ್ಕೆೆ ತೆಗೆದುಕೊಂಡು, ಆಯಾ ಬಣಗಳ ಬೆಂಬಲಿಗರನ್ನು ಕರ್ತವ್ಯಕ್ಕೆೆ ವಾಪಸ್ ಕರೆತರುವ ಪ್ರಯತ್ನವನ್ನೂ ಸರ್ಕಾರ ನಡೆಸುತ್ತಿದೆ.

ಹಲವು ನೌಕರರ ಮನವೊಲಿಕೆ ಯತ್ನದ ಪರಿಣಾಮ ಏ.14ರಂದು 3,200ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಿವೆ. ಆದರೂ, ಈವರೆಗೆ ಬಸ್‌ಗಳ ಕಾರ್ಯಾಚರಣೆ ಪ್ರಮಾಣ ಶೇ. 20ರಷ್ಟೂ ದಾಟಿಲ್ಲ. ಅಲ್ಲದೆ, ಒಂದು ವಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಸ್‌ಗಳು ಸಂಚರಿಸದ ಕಾರಣ ಇಲಾಖೆಗೆ ₹152 ಕೋಟಿ ವರಮಾನ ಕಡಿಮೆಯಾಗಿದೆ ಎಂದು ಸರ್ಕಾರ ಹೇಳಿದೆ.

ADVERTISEMENT

ಈ ಮಧ್ಯೆೆ ಮೈಸೂರು, ಬೆಂಗಳೂರಿನ ಆಯ್ದ ಘಟಕಗಳಲ್ಲಿ ಶೇ. 50-70ರಷ್ಟು ಬಸ್‌ಗಳ ಸಂಚಾರ ನಡೆದಿದೆ. ಒಂದು ವೇಳೆ ಮುಂದಿನ ಎರಡು ದಿನಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಬಸ್‌ಗಳು ರಸ್ತೆೆಗಿಳಿದರೆ, ಸಾರಿಗೆ ವ್ಯವಸ್ಥೆ ಸರ್ಕಾರ ಮತ್ತೆ ಹಿಡಿತ ಸಾಧಿಸಿದಂತಾಗುತ್ತದೆ.

ಪ್ರತಿಭಟನೆ ತೀವ್ರ:ಹಬ್ಬದ ದಿನವಾದ ಮಂಗಳವಾರ ಭಿಕ್ಷಾಟನೆ ಮೂಲಕ ಪ್ರತಿಭಟಿಸಿದ್ದ ನೌಕರರು, ಬುಧವಾರವೂ ಕುಟುಂಬ ಸಮೇತರಾಗಿ ಬೀದಿಗಿಳಿದು ಹೋರಾಟ ಮುಂದುವರಿಸಿದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಆತ್ಮಹತ್ಯೆ ಯತ್ನ ನಡೆಸಿದರೆ, ಬಿಎಂಟಿಸಿ ನಿರ್ವಾಹಕರೊಬ್ಬರು ನೇಣಿಗೆ ಶರಣಾಗಿದ್ದಾರೆ.

ಬೆಳಗಾವಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಚಾಲಕರೊಬ್ಬರಿಗೆ ನೌಕರರ ಕುಟುಂಬದವರು ತಾಳಿ ಹಾಕುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಸಾವಿರಾರು ಜನ ವಾರದಿಂದ ಮುಷ್ಕರ ಮಾಡುತ್ತಿರುವ ವೇಳೆ, ಕೆಲವರು ಹೀಗೆ ಕರ್ತವ್ಯಕ್ಕೆ ಹಾಜರಾಗುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೂರು ಸ್ವೀಕರಿಸಲು ನಕಾರ:‘ಮಾರ್ಚ್‌ ತಿಂಗಳ ವೇತನ ಬಿಡುಗಡೆ ಮಾಡದ ಕಾರಣ ಆಯಾ ಡಿಪೊ ವ್ಯವಸ್ಥಾಪಕರ ವಿರುದ್ಧ ಸಾಮೂಹಿಕವಾಗಿ ಪೊಲೀಸರಿಗೆ ದೂರು ನೀಡಲು ಯೋಜಿಸಲಾಗಿತ್ತು. ಆದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಗುರುವಾರದಿಂದ ರಿಜಿಸ್ಟರ್ ಪೋಸ್ಟ್ ಮೂಲಕ ದೂರು ದಾಖಲು ಮಾಡುತ್ತೇವೆ, ನಂತರ ಹೈಕೋರ್ಟ್‌ಗೆ ಮನವಿ ಮಾಡುತ್ತೇವೆ’ ಎಂದು ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಾರಿಗೆ ನೌಕರರು ಹಾಗೂ ಅವರ ಕುಟುಂಬದವರು ಸೇರಿದರೆ 6 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಇದನ್ನು ಮರೆಯಬಾರದು’ ಎಂದೂ ಅವರು ಹೇಳಿದರು.

ಮೇಣದ ಬತ್ತಿ ಹಿಡಿದು ಪ್ರತಿಭಟನೆ ಇಂದು

‘ರಾಜ್ಯದಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು. ಸಾರಿಗೆ ನೌಕರರ ಬದುಕನ್ನು ಕತ್ತಲಲ್ಲಿಟ್ಟಿರುವ ಸರ್ಕಾರದ ನಡೆ ಖಂಡಿಸಿ, ಗುರುವಾರ ಸಂಜೆ 6ರಿಂದ 7ರವರೆಗೆ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಗುವುದು’ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

‘ರಾಜ್ಯದ ಎಲ್ಲ ಶಾಸಕರ ಮನೆ ಮುಂದೆ ಏಪ್ರಿಲ್ 16 ರಂದು ಧರಣಿ ನಡೆಸಲಾಗುವುದು. ನಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಯವರ ಮುಂದೆ ಇಡುವಂತೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ಸಾರಿಗೆ ನೌಕರ ಆತ್ಮಹತ್ಯೆ

ನರೇಗಲ್ (ಗದಗ ಜಿಲ್ಲೆ): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರ ಟಿಪ್ಪುಸುಲ್ತಾನ ಅಲ್ಲಾಸಾಬ್ ತಾಳಕೇರಿ (42) ನರೇಗಲ್ ಸಮೀಪದ ನಿಡಗುಂದಿ ಗ್ರಾಮದ ತಮ್ಮ ಮನೆಯಲ್ಲಿ ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಬಿಎಂಟಿಸಿಯಲ್ಲಿ 15 ವರ್ಷಗಳಿಂದ ಚಾಲಕ/ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಇಬ್ಬರು ಪತ್ನಿಯರು, ನಾಲ್ವರು ಪುತ್ರರು ಇದ್ದಾರೆ.

ಮುಷ್ಕರ ಆರಂಭಗೊಂಡಿದ್ದರಿಂದ ವಾರದ ಹಿಂದೆ ನಿಡಗುಂದಿ ಗ್ರಾಮಕ್ಕೆ ಬಂದಿದ್ದರು. ಮನೆ ನಿರ್ವಹಣೆಗಾಗಿ ನಾಲ್ಕು ಎಕರೆ ಹೊಲವನ್ನು ₹4 ಲಕ್ಷಕ್ಕೆ ಅಡವಿಟ್ಟಿದ್ದರು. ಮನೆ ಕಟ್ಟಿಸಲು ₹3 ಲಕ್ಷ ಕೈ ಸಾಲ ಹಾಗೂ ಸ್ನೇಹಿತರು, ಸಂಬಂಧಿಕರ ಬಳಿಯೂ ಸಾಲ ಮಾಡಿದ್ದರು ಎನ್ನಲಾಗಿದೆ.

‘6ನೇ ವೇತನ ಜಾರಿಯಾಗದಿದ್ದರೆ ಸಂಸಾರ ನಿರ್ವಹಣೆ ಕಷ್ಟವಾಗಲಿದೆ ಎಂದು ಆಗಾಗ ಹೇಳುತ್ತಿದ್ದರು. ಇದೇ ಕೊರಗಿನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯಕ್ಕೆ ನನ್ನ ಪತಿಯ ಜೀವ ಬಲಿಯಾಗಿದೆ’ ಎಂದು ಮೊದಲ ಪತ್ನಿ ಫಾತೀಮಾ ಆರೋಪಿಸಿದರು.

‘ಕುಟುಂಬ ನಿರ್ವಹಣೆಗೆ ಸಂಬಳ ಸಾಲುತ್ತಿರಲಿಲ್ಲ. ಈ ತಿಂಗಳೂ ಸಂಬಳ ಆಗುವುದಿಲ್ಲ ಎಂದು ಪತಿ ಗೋಳಾಡುತ್ತಿದ್ದರು. ಅವರು ದುಡಿದರಷ್ಟೇ ಜೀವನ ನಡೆಯುತ್ತಿತ್ತು. ಅವರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆಯಾಗಿದೆ’ ಎಂದು ಎರಡನೇ ಪತ್ನಿ ಸಂಶಾದ್‌ ಬೇಗಂ ಆರೋಪಿಸಿದರು.

ಬಸ್‌ಗೆ ಹಾನಿ: ಕಾನೂನು ಕ್ರಮದ ಎಚ್ಚರಿಕೆ

‘ಎಂಟು ದಿನಗಳಲ್ಲಿ ರಾಜ್ಯದಾದ್ಯಂತ 60 ಸರ್ಕಾರಿ ಬಸ್‌ಗಳ ಮೇಲೆ ದಾಳಿ ನಡೆದಿದೆ. ಬಸ್‌ಗೆ ಹಾನಿ ಮಾಡಿದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಎಚ್ಚರಿಸಿದ್ದಾರೆ.

‘ಕೆಎಸ್‌ಆರ್‌ಟಿಸಿಯ 34, ಬಿಎಂಟಿಸಿಯ 3, ಈಶಾನ್ಯ ಸಾರಿಗೆಯ 20 ಮತ್ತು ವಾಯವ್ಯ ಸಾರಿಗೆಯ 3 ಸೇರಿ ಒಟ್ಟು 60 ಬಸ್‌ಗಳು ಹಾನಿಗೀಡಾಗಿವೆ’ ಎಂದು ಅವರು ತಿಳಿಸಿದ್ದಾರೆ.

‘ಈಗಾಗಲೇ ಅನೇಕ ನೌಕರರು ತಾವು ಮುಷ್ಕರದಿಂದ ಬೇಸತ್ತಿರುವುದಾಗಿ ತಿಳಿಸಿದ್ದಾರೆ. ಆದಾಗ್ಯೂ ಕೆಲ ಪಟ್ಟಭದ್ರರು ಈ ಮುಷ್ಕರವನ್ನು ಮುಂದುವರಿಸುವ ಮೂಲಕ ಸಾರ್ವಜನಿಕರಿಗೆ ಮಾತ್ರವಲ್ಲದೆ, ನಮ್ಮ ನೌಕರರಿಗೂ ತೊಂದರೆ ನೀಡುತ್ತಿದ್ದಾರೆ’ ಎಂದು ದೂರಿದರು.

ಬೆಂಬಲ ಕೋರಿ ಯಶ್‌ಗೆ ಪತ್ರ

‘ಸಾರಿಗೆ ನೌಕರಿಯಲ್ಲಿದ್ದವರ ಮಗನಾದ ನೀವು ನಮ್ಮ ಮುಷ್ಕರಕ್ಕೆ ಬೆಂಬಲ ನೀಡಿ’ ಎಂದು ಕೋರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಚಿತ್ರನಟ ಯಶ್‌ ಅವರಿಗೆ ಪತ್ರ ಬರೆದಿದೆ.

‘ಸರ್ಕಾರದ ದೌರ್ಜನ್ಯ, ದಬ್ಬಾಳಿಕೆಯಿಂದ ಬೇಸತ್ತು ಸಾರಿಗೆ ನೌಕರರು ಕುಟುಂಬ ಸಮೇತ ಹೋರಾಟ ನಡೆಸುತ್ತಿದ್ದಾರೆ. ನೀವು ಬೆಂಬಲ ನೀಡಿದರೆ, ನಮ್ಮ ಹೋರಾಟದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಏಳಿಗೆಯನ್ನು ಹೆಮ್ಮೆಯಿಂದ ಸಂಭ್ರಮಿಸುವ ನಾವು ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿದ್ದೇವೆ’ ಎಂದೂ ಒಕ್ಕೂಟ ಹೇಳಿದೆ.

ಏಳು ದಿನಗಳಲ್ಲಾದ ಆದಾಯ ನಷ್ಟ (₹ ಕೋಟಿಗಳಲ್ಲಿ)

ಕೆಎಸ್‌ಆರ್‌ಟಿಸಿ;70

ಬಿಎಂಟಿಸಿ;20

ಎನ್‌ಡಬ್ಲ್ಯುಆರ್‌ಟಿಸಿ; 30.5

ಎನ್‌ಇಕೆಆರ್‌ಟಿಸಿ;31.5

ಒಟ್ಟು;152

ಬುಧವಾರ ಕಾರ್ಯಾಚರಣೆ ನಡೆಸಿದ ಬಸ್‌ಗಳ ವಿವರ

ಕೆಎಸ್‌ಆರ್‌ಟಿಸಿ;1,669

ಬಿಎಂಟಿಸಿ;426

ಎನ್‌ಇಕೆಆರ್‌ಟಿಸಿ;641

ಎನ್‌ಡಬ್ಲ್ಯುಕೆಆರ್‌ಟಿಸಿ; 510

ಒಟ್ಟು;3,246

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.