ADVERTISEMENT

ಸಾರಿಗೆ ನೌಕರರು ಮುಷ್ಕರ ಕೈಬಿಡುವ ಸಾಧ್ಯತೆ

ಸಾರಿಗೆ ನೌಕರರ ಕೂಟದ ಸಭೆ ನಿಗದಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 5:58 IST
Last Updated 14 ಡಿಸೆಂಬರ್ 2020, 5:58 IST
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಸಾರಿಗೆ ಸಿಬ್ಬಂದಿ
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಸಾರಿಗೆ ಸಿಬ್ಬಂದಿ    

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಮುಷ್ಕರ ಕೈಬಿಡುವ ಕುರಿತಂತೆ ಚರ್ಚಿಸಲು ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಕೆಲವೇ ಕ್ಷಣಗಳಲ್ಲಿ ಸಭೆ ನಡೆಸಲಿದ್ದಾರೆ. ಈ ಸಭೆಯ ಬಳಿಕ ಮುಷ್ಕರ ವಾಪಸ್‌ ಪಡೆಯುವ ಸಾಧ್ಯತೆ ಇದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಬಸ್‌ ಸಂಚಾರ ಆರಂಭವಾಗಿದ್ದರೂ, ದೊಡ್ಡ ಸಂಖ್ಯೆಯ ನೌಕರರು ಇನ್ನೂ ಕರ್ತವ್ಯಕ್ಕೆ ಮರಳಿಲ್ಲ. ಭಾನುವಾರ ರಾತ್ರಿ ನಡೆದ ಬೆಳವಣಿಗೆಗಳಿಂದ ಸಾರಿಗೆ ನಿಗಮಗಳ ನೌಕರರಲ್ಲೇ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ಕಾರಣದಿಂದ ಮುಂದಿನ ನಡೆ ಕುರಿತು ನಿರ್ಧರಿಸಲು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್‌ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.

ಮುಷ್ಕರದ ನೇತೃತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಾರಿಗೆ ನೌಕರರ ಕೂಟದ ಜತೆ ಸತತ ಸಂಪರ್ಕದಲ್ಲಿರುವ ಸಚಿವರು, ಶಾಸಕರು ಮುಷ್ಕರ ಕೈಬಿಡುವಂತೆ ಮನವೊಲಿಸುತ್ತಿದ್ದಾರೆ. ಭಾನುವಾರದ ಸಂಧಾನ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನಗಳನ್ನು ಒಪ್ಪಿಕೊಂಡು ಮುಷ್ಕರ ನಿಲ್ಲಿಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಖ್ಯಮಂತ್ರಿ ಸರಣಿ ಸಭೆ

ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೋಮವಾರ ಬೆಳಿಗ್ಗೆಯಿಂದ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಾರಿಗೆ ಮತ್ತು ಗೃಹ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಕಂದಾಯ ಸಚಿವ ಆರ್‌. ಅಶೋಕ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಷ್ಕರನಿರತ ನೌಕರರ ಮುಖಂಡರ ಜತೆ ಚರ್ಚಿಸಿ ಬಿಕ್ಕಟ್ಟು ಶಮನಕ್ಕೆ ಯತ್ನಿಸುತ್ತಿರುವ ಅಶೋಕ ಅವರು ಕೆಲವೇ ಕ್ಷಣಗಳಲ್ಲಿ ಯಡಿಯೂರಪ್ಪ ನಿವಾಸಕ್ಕೆ ಬರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.