ADVERTISEMENT

ಮುಷ್ಕರಕ್ಕೆ ಕರೆ ನೀಡಿದವರ ಜತೆ ಚರ್ಚಿಸುವಂತೆ ಕಾರ್ಮಿಕ ಮುಖಂಡರ ಸಲಹೆ

ಮಾತುಕತೆಯಿಂದ ದೂರ ಉಳಿದ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 7:52 IST
Last Updated 13 ಡಿಸೆಂಬರ್ 2020, 7:52 IST
3ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ
3ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ   

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಬೇಡಿಕೆ ಕುರಿತು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಕರೆದಿರುವ ಸಭೆಯಿಂದ ಪ್ರತಿಭಟನಾನಿರತರು ದೂರ ಉಳಿದಿದ್ದಾರೆ.

ಉಪ‌ ಮುಖ್ಯಮಂತ್ರಿ ಕರೆದಿರುವ ಸಭೆಗೆ ಸಾರಿಗೆ ನೌಕರರ ಕೂಟದ ಪ್ರತಿನಿಧಿಗಳು ಹಾಜರಾಗಿಲ್ಲ. ತಮಗೆ ಸಭೆಗೆ ಆಹ್ವಾನ ಬಂದಿಲ್ಲ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಸಾರಿಗೆ ಕಾರ್ಮಿಕರ ಇತರ ಸಂಘಟನೆಗಳ ಮುಖಂಡರ ಜತೆ ಉಪ ಮುಖ್ಯಮಂತ್ರಿ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಆದರೆ, ಮುಷ್ಕರಕ್ಕೆ ಕರೆ ನೀಡಿದ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸುವಂತೆ ಸಭೆಗೆ ಹಾಜರಾಗಿದ್ದ ಕಾರ್ಮಿಕ ಮುಖಂಡರು ಸಲಹೆ ನೀಡಿದ್ದಾರೆ.

ಕಾರ್ಮಿಕ ಮುಖಂಡರ ಜತೆ ಸಭೆ ಮುಗಿಸಿದ ಉಪ ಮುಖ್ಯಮಂತ್ರಿ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ಮೊದಲ‌ ಸುತ್ತಿನ‌ಸಭೆ ಮುಗಿಸಿದ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ್ದಾರೆ. ಮುಖ್ಯಮಂತ್ರಿ ಜತೆ ಚರ್ಚಿಸಿದ ಬಳಿಕ ಕಾರ್ಮಿಕ‌ಮುಖಂಡರ ಜತೆ ಮತ್ತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಎಐಟಿಯುಸಿ‌ ರಾಜ್ಯ ಮಂಡಳಿ ಅಧ್ಯಕ್ಷ ಎಚ್.ವಿ.‌ ಅನಂತ ಸುಬ್ಬರಾವ್, ಸಿಐಟಿಯು ಮುಖಂಡರಾದ ಎಚ್.ಡಿ. ರೇವಪ್ಪ, ಎಚ್.ಎಸ್. ಮಂಜಪ್ಪ, ಕೆ. ಪ್ರಕಾಶ್, ಬಿಎಂಎಸ್ ಮುಖಂಡ ಪೂಂಜ, ಸಾರಿಗೆ ನೌಕರರ ಮಹಾಮಂಡಲದ ಮುಖಂಡ ಜಯದೇವರಾಜೇ ಅರಸ್ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ.

ಸಾರಿಗೆ ನಿಗಮಗಳ‌ ಕೂಟದ ಮುಖಂಡರ ಜತೆ ಮಾತುಕತೆ ನಡೆಸಿ ಮುಷ್ಕರ‌ ಅಂತ್ಯಗೊಳಿಸಲು ಸಭೆಯಲ್ಲಿ ಪಾಲ್ಗೊಂಡಿರುವ ಮುಖಂಡರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.