ADVERTISEMENT

ಕೋವಿಡ್‌ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳ ಚಿಕಿತ್ಸೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 20:15 IST
Last Updated 22 ಜುಲೈ 2021, 20:15 IST

ಬೆಂಗಳೂರು: ಕೋವಿಡ್‌ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ಪುನರಾರಂಭಿಸುವಂತೆ ಆರೋಗ್ಯ ಇಲಾಖೆಯು ಸುತ್ತೋಲೆ ಹೊರಡಿಸಿದೆ.

ಕೋವಿಡ್‌ ಆಸ್ಪತ್ರೆಗಳಲ್ಲಿ ಅನ್ಯ ರೋಗಗಳಿಗೆ ಚಿಕಿತ್ಸೆ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಕೊರೊನಾ ಎರಡನೇ ಅಲೆಯ ಅಬ್ಬರ ತಗ್ಗಿದ್ದು, ಸೋಂಕು ಹಾಗೂ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೊರರೋಗಿಗಳಿಂದ ಪ್ರಾರಂಭಿಸಿ ಎಲ್ಲಾಾ ರೀತಿಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಆರಂಭಿಸಬೇಕು. ಜತೆಗೆ ಕೋವಿಡ್ ಚಿಕಿತ್ಸೆಯನ್ನೂ ಮುಂದುವರಿಸಬೇಕು ಎಂದು ಇಲಾಖೆಯ ಆಯುಕ್ತ ಡಾ.ಕೆ.ವಿ. ತ್ರಿಲೋಕ್‌ಚಂದ್ರ ಸೂಚಿಸಿದ್ದಾರೆ.

ಕೋವಿಡ್‌ ಆಸ್ಪತ್ರೆ ಎಂಬ ಕಾರಣ ನೀಡಿ, ರೋಗಿಗಳನ್ನು ಅನಗತ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವುದನ್ನೂ ನಿರ್ಬಂಧಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ಕೋವಿಡ್‌ ಪೂರ್ವದಲ್ಲಿದ್ದಂತೆ, ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಮತ್ತು ಸಾಮಾನ್ಯ ರೋಗಿಗಳ ಬರುವಿಕೆ, ಹೋಗುವಿಕೆ, ಪ್ರಯೋಗಾಲಯ ಪರೀಕ್ಷೆ, ಆರೈಕೆ, ಚಿಕಿತ್ಸೆ ಮತ್ತು ಸಲಹಾ ಕಾರ್ಯಾಚರಣೆಗಳು ಪ್ರತ್ಯೇಕವಾಗಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ನೆರೆ ರಾಜ್ಯಗಳಲ್ಲಿ ಕೋವಿಡ್ ಮತ್ತೆ ಏರಿಕೆಯಾಗಿರುವುದರಿಂದ ಸೋಂಕಿನ ಬಗ್ಗೆ ಮುಂಜಾಗ್ರತೆ ವಹಿಸುವುದರ ಜತೆಗೆ ಕೋವಿಡ್ ಆರೈಕೆ ಹಾಗೂ ಚಿಕಿತ್ಸಾ ವ್ಯವಸ್ಥೆಯನ್ನು ಮುಂದೆ ತಿಳಿಸುವವರೆಗೂ ಮಧ್ಯಮ ಹಂತದಲ್ಲಿ ಉಳಿಸಿಕೊಂಡಿರಬೇಕು. ಸೋಂಕು ವ್ಯಾಪಕವಾದ ಕೂಡಲೇ ಅಲ್ಪ ಸಮಯದಲ್ಲೇ ಆಸ್ಪತ್ರೆಗಳೆಲ್ಲ ಮತ್ತೆ ಕೋವಿಡ್ ಚಿಕಿತ್ಸೆಗೆ ಪೂರ್ಣಪ್ರಮಾಣದಲ್ಲಿ ಸಜ್ಜಾಗುವ ಸ್ಥಿತಿಯಲ್ಲಿರಬೇಕು ಎಂದೂ ತ್ರಿಲೋಕ್‌ಚಂದ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.