ADVERTISEMENT

ತುಳಸಿ ಗೌಡ ನಿಧನ: ಮರಗಳೊಂದಿಗೆ ಅಮರವಾದರು...

ಎಸ್.ರಶ್ಮಿ
Published 16 ಡಿಸೆಂಬರ್ 2024, 20:08 IST
Last Updated 16 ಡಿಸೆಂಬರ್ 2024, 20:08 IST
<div class="paragraphs"><p>ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಪ್ರದಾನ ಮಾಡಿದ ಪ್ರಶಸ್ತಿ, ಪುರಸ್ಕಾರಗಳೊಂದಿಗೆ ತುಳಸಿ ಗೌಡ</p></div>

ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಪ್ರದಾನ ಮಾಡಿದ ಪ್ರಶಸ್ತಿ, ಪುರಸ್ಕಾರಗಳೊಂದಿಗೆ ತುಳಸಿ ಗೌಡ

   

‘ಮಕ್ಕಳನ್ನ ಹೆತ್ತು ಬೆಳಸ್ತೀವಿ. ನಮಗಷ್ಟೆ ಆಗ್ತಾರೆ. ಸಸಿ ನೆಟ್ಟು ಮರ ಬೆಳಸ್ರಿ. ಏಳೇಳು ತಲೆಮಾರಿಗೂ ಹಣ್ಣು, ಹಂಪಲು, ನೆರಳು ನೀಡುತ್ವೆ, ಅಲ್ಲಾ...’ ಪ್ರಶ್ನಿಸಿ ಸುಮ್ಮನಾಗಿದ್ದರು ತುಳಸಿ ಗೌಡ. 

ಪದ್ಮ ಪ್ರಶಸ್ತಿ ಪಡೆದ ನಂತರ ಹೊನ್ನಾಳಿಯ ತಮ್ಮ ಮನೆಯಲ್ಲಿ ‘ಪ್ರಜಾವಾಣಿ’ ಜೊತೆಗೆ ಮಾತನಾಡಿದ್ದ ತುಳಸಜ್ಜಿ ಈಗ ಅಮರರಾದಾಗ ಅವರ ಆ ಮಾತುಗಳು ಮತ್ತೆ ಮತ್ತೆ ಕಾಡುತ್ತಿವೆ.

ADVERTISEMENT

ಕರಿಮಣಿಗಳ ಹಾರದಿಂದ ತುಂಬಿದ ಕೊರಳಿನ, ಹಾಲಕ್ಕಿ ಸಂಪ್ರದಾಯದಂತೆ ಉಟ್ಟ ಸೀರೆಯುಟ್ಟ ಈ ಅಜ್ಜಿ ಬರಿಗಾಲಿನಲ್ಲಿ ನಡೆದು ಬರುತ್ತಿದ್ದರೆ ಹಾಲಕ್ಕಿ ಸಂಸ್ಕೃತಿಯೇ ನಡೆದುಬಂದಂತೆ ಭಾಸವಾಗುತ್ತಿತ್ತು. ರಾಶಿ ಗಿಡ ನೆಟ್ಟ ಈ ಸಾಧಕಿಗೆ ಒಂದಿನಿತೂ ಹಮ್ಮು–ಬಿಮ್ಮು ಇರಲಿಲ್ಲ. ಮುಂದೆ ಈಕೆ ವೃಕ್ಷಮಾತೆ ಆಗುತ್ತಾಳೆ ಎಂಬ ಮುಂಗಾಣ್ಕೆಯನ್ನು ಕಂಡೋ ಏನೋ ಅವರ ತಂದೆ–ತಾಯಿ ಅವರಿಗೆ ತುಳಸಿ ಎಂಬ ಹೆಸರಿಟ್ಟಿರಬೇಕು!

ಬಡತನದ ಬೇಗೆಯಲ್ಲೇ ಬೆಳೆದ ತುಳಸಿಯವರಿಗೆ ಸಿಕ್ಕಿದ್ದು ಕೂಲಿ ಮಾಡುತ್ತಲೇ ಪಡೆದ ಅನುಭವದ ವಿದ್ಯೆ ಮತ್ತು ಅಪಾರ ಪರಿಸರಪ್ರೀತಿ. ‘ನಾನ್ಯಾವತ್ತೂ ಸಸಿಗಳ ಲೆಕ್ಕ ಇಡಲಿಲ್ಲ. ಬೀಜ ಮಣ್ಣಲ್ಲಿ ಬಿತ್ತಿದಾಗ ಅದು ಮೊಳಕೆಯೊಡೆದು ಮಣ್ಣಿಂದ ಹೊರಬರುವುದನ್ನು ನೋಡಿ ಆನಂದಿಸುತ್ತಿದ್ದೆ. ಸೃಷ್ಟಿಯ ಸೋಜಿಗ ನೋಡಿ, ಸಣ್ಣದೊಂದು ಕಾಳಲ್ಲಿ, ದೊಡ್ಡದೊಂದು ಮರ ಬೆಳೆಯುವುದು. ಅದರ ಸಂಘರ್ಷಗಳೇನು ಕಡಿಮೆಯೇ. ಬಿಸಿಲು, ಮಳೆಗೆ ಮೈದೆರೆದುಕೊಂಡು ಬಾನೆತ್ತರಕ್ಕೆ ಬೆಳೆದು, ಎಲ್ಲರಿಗೂ ಫಲ, ನೆರಳು ನೀಡ್ತಾವಲ್ಲ, ನಾವು ಮನುಷ್ಯರು ಏನು ಮಾಡ್ತೀವಿ ಅನ್ನೂದೆ ಯೋಚನೆ ಆಗ್ತಿತ್ತು‘ ಎನ್ನುತ್ತಿದ್ದರು ಈ ಅಜ್ಜಿ. 

ಕಾಡಿನಲ್ಲಿ ಉದುರಿಬಿದ್ದ ಕಟ್ಟಿಗೆಗಳನ್ನು ಒಟ್ಟು ರಾಶಿ ಮಾಡುವಾಗ ಅಲ್ಲಿ ಸಿಗುತ್ತಿದ್ದ ನಾನಾ ನಮೂನಿಯ ಗಿಡಗಳ ಬೀಜಗಳನ್ನೂ ಆಯ್ದು ಸೆರಗಿನಲ್ಲಿ ಕಟ್ಟಿಕೊಂಡು ಬರುತ್ತಿದ್ದರಂತೆ ತುಳಸಿ ಅಜ್ಜಿ. ಅವುಗಳನ್ನು ಬೆಳೆಸಿ, ಅರಣ್ಯ ಇಲಾಖೆಗೆ ಕೊಡುತ್ತಿದ್ದ ಅವರು, ಮುಂದೆ ಅದೇ ಇಲಾಖೆಯಲ್ಲಿ ಕೂಲಿ ಕೆಲಸ ಮಾಡಿದರು.

ಮನೆ, ಮಕ್ಕಳಿಗಿಂತ ಮರಗಳೇ ಅವರಿಗೆ ಹೆಚ್ಚು ಆಪ್ತವಾದವು. ಸಸಿ ನೆಟ್ಟು ಅವುಗಳ ಜೊತಿಗೆ ಮಾತಿಗಿಳಿಯುತ್ತಿದ್ದರು. ‘ಮನುಷ್ಯರ ಜೊತೆ ಮಾತಾಡಿದರೆ ಜಗಳಗಳಾಗುತ್ತಿದ್ದವು. ಸಸಿ ಜೊತೆಗೆ ಇದ್ಯಾವುದೂ ಆಗೂದಿಲ್ಲ. ಅದಕ್ಕೇ ಪ್ರತಿದಿನ ಸಸಿ ಮಾಡೋದು, ಸಸಿ ನೆಡೋದು ನನಗಿಷ್ಟ ಆಗುತ್ತಿತ್ತು’ ಎನ್ನುತ್ತಿದ್ದರು ಅಜ್ಜಿ. 

‘ಹಬ್ಬ, ಹರಿದಿನಗಳನ್ನೆಲ್ಲ ನಮ್ಮತ್ತೆ ನೋಡ್ಕೊತಿದ್ರು. ಅವರೇ ಅಡುಗೆ ಮಾಡೋರು. ನನ್ನ ಮಕ್ಕಳನ್ನ ಬೆಳೆಸಿದ್ರು. ನಾನು ಸಸಿಗಳನ್ನೇ ಮಕ್ಕಳಂತೆ ಬೆಳೆಸಿದೆ. ಲಕ್ಷ ಸಸಿ ಅಂತ ಲೆಕ್ಕ ಹಾಕಿ ಪ್ರಶಸ್ತಿ ಕೊಟ್ರು. ಹಕ್ಕಿಗಳೆಲ್ಲ ಪ್ರತಿವರ್ಷ ಸಾವಿರ ಸಾವಿರ ಸಸಿ ಬೆಳೆಯುವಂತೆ ಬೀಜ ಹರಡ್ತವೆ ಅವುಕ್ಕೇನು ಪ್ರಶಸ್ತಿ ಕೊಡ್ತೀವಿ’ ಎಂದು ಪ್ರಶ್ನಿಸಿದ್ದ ವೃಕ್ಷಮಾತೆ ಆಕೆ. ಕಾಡಿನ ಅಪಾರ ಜ್ಞಾನ ಅವರಿಗೆ ಸಿದ್ಧಿಸಿತ್ತು. ಯಾವ ಗಿಡದ ಬೀಜವನ್ನು ಹೇಗೆ ಸಂಗ್ರಹಿಸಬೇಕು, ಬೀಜೋಪಚಾರ ಹೇಗೆ ಮಾಡಬೇಕು ಎಂಬುದರ ಅರಿವು ಅವರಿತ್ತು.

‘ಪದ್ಮ ಪ್ರಶಸ್ತಿ ಬಂದಾಗ ಇಮಾನದಾಗೆ (ವಿಮಾನ) ಹೋದೆ. ಬರೀ ಮೋಡ ಕಾಣಸ್ತಿತ್ತು, ಹತ್ತಿ ಹಿಂಜಿದಂಗೆ. ನಮ್ಮ ಕಾಡು ದಾರಿಯ ನೆನಪು ಕಾಡಿತು. ಅದೆಷ್ಟು ಸಸಿ, ಮರ, ಹಚ್ಚಹಸಿರು, ಎಳೆ ಹಸಿರು, ಬಣ್ ಬಣ್ಣದ ಹೂವ.. ನಾವು ಭೂಮಿ‌ಮ್ಯಾಲಿದ್ದಂಗೆ! ಎಲ್ಲ ಒಟ್ಗೆ ಇದ್ದಂಗೆ ಅವೂ ಕಾಣ್ತವೆ. ಆದರೆ ಅವು ಮಾತ್ರ ನಾನು, ತಾನು ಅನ್ನದೆ ಎಲ್ಲರಿಗೂ ಉಪಕಾರನೇ ಮಾಡ್ತವೆ. ನಾವೂನು ಹಂಗಾಗಬೇಕು ಮಗ.. ಹಂಗಾಗಿ ನೀವೂನು...’ ಅನ್ನುತ್ತ ಸಸಿಗಳಿಗೆ ನೀರೆರೆಯಲು ಹೊರಡುತ್ತಿದ್ದ ತುಳಸಿ ಅಜ್ಜಿ ಇನ್ನಿಲ್ಲ.

ಈಗ ಮರಗಳ ಸುಳಿಗಾಳಿಯೊಂದಿಗೆ ತುಳಸಿ ಗೌಡ ಅವರ ಉಸಿರು ಸಂವಾದಿಯಾಗಿದೆ. ಅವರು ಮೌನವಾಗಿದ್ದಾರೆ.

ರಟ್ಟೆ ಗಟ್ಟಿಯಾಗಬೇಕು...
‘ಊಟದಲ್ಲೇನಿಷ್ಟ?’ ಅಜ್ಜಿಯ ಮುಂದೆ ಈ ಪ್ರಶ್ನೆ ಇಟ್ಟಾಗ ಅವರ ಕೊಟ್ಟ ಉತ್ತರ ಏನಾಗಿತ್ತು ಗೊತ್ತೆ? ಇಷ್ಟ, ಕಷ್ಟ ಅಂತನ್ನಬಾರದು ಮಗ.. ರಟ್ಟೆಗೆ ಕಸುವು ಕೊಡುವುದೇನಾದರೂ ಉಣ್ಣಬೇಕು. ಬೀಜವೊಂದು ಅನ್ನವಾಗೂದು, ಜೀವವೊಂದು (ಮೀನು, ಕೋಳಿ) ಆಹಾರ ಆಗೂದು ಸುಮ್ನಲ್ಲ. ಹೊಟ್ಟೆ ತುಂಬಬೇಕು. ರಟ್ಟೆ ಗಟ್ಟಿಯಾಗಬೇಕು. ಅಂಥದ್ದೇನಾದರೂ ಅದೀತು. ಜೀವಕ್ಕೆ ಬೇಕಿರುವಷ್ಟು ಉಣ್ಣಬೇಕು. ಜೀವನಕ್ಕೆ ಬೇಕಿರುವಷ್ಟು ಗಳಿಸಬೇಕು. ಯಾವುದು ಹೆಚ್ಚಾದರೂ ಮನಷಂಗೆ ಸೊಕ್ಕು ಬರ್ತದ. ನಾನು ಮೀನೂ ಉಣ್ತೀನಿ, ಗಂಜಿನೂ ಉಣ್ತೀನಿ. ಏನಿದ್ರೂ ಉಣ್ತೀನಿ. ಋಣ ತೀರಿದರೆ ಊಟ ಎಲ್ಲಿ? ನೀರೆಲ್ಲಿ? ತುಳಸಿ ಗೌಡ ಅವರ ಬದುಕಿನ ಸೂತ್ರ ಇದಾಗಿತ್ತು. ಸಮಾಧಾನದ ಮಂತ್ರವೂ ಇದೇ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.