ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಹಿಂದುಳಿದ ವರ್ಗಗಳ ಆಯೋಗ, ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಯಲ್ಲಿರುವ ‘ಟೋಕರೆ ಕೋಲಿ’ ಮತ್ತು ‘ತಳವಾರ’ ಜಾತಿಗಳನ್ನು ಇತರ ಹಿಂದುಳಿದ ವರ್ಗಗಳ (ಒಬಿಸಿ) ಜಾತಿ ಪಟ್ಟಿಯಲ್ಲಿ ಸೇರಿಸಿ ಅನ್ಯಾಯ ಮಾಡಿದೆ’ ಎಂದು ಆರೋಪಿಸಿರುವ ಬುಡಕಟ್ಟು ರಕ್ಷಣಾ ಸಮಿತಿ, ಆಯೋಗಕ್ಕೆ ಕಾನೂನು ನೋಟಿಸ್ ನೀಡಿದೆ.
‘ಸ್ವಾತಂತ್ರ್ಯಕ್ಕೂ ಮೊದಲೇ ಟೋಕರೆ ಕೋಲಿ ಎಸ್‌ಟಿ ಜಾತಿ ಪಟ್ಟಿಯಲ್ಲಿದೆ. ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ 1950ರಲ್ಲಿ ಈ ವಿವರವಿದೆ. ಈ ಜಾತಿಯನ್ನು ಈಗ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಯಾವುದೇ ಆಧಾರವಿಲ್ಲದೆ ಮತ್ತು ಈ ಸಮುದಾಯದ ಜನರಿಗೆ ಯಾವುದೇ ಸ್ಪಷ್ಟೀಕರಣ ಅಥವಾ ಸೂಚನೆ ನೀಡದೆ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.
‘2020ರಲ್ಲಿ ಕಾಯ್ದೆ ತಿದ್ದುಪಡಿ ಮೂಲಕ ತಳವಾರ ಜಾತಿಯನ್ನು ಎಸ್‌ಟಿ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೆ, ಕರ್ನಾಟಕ ರಾಜ್ಯ ಸರ್ಕಾರ 2022 ಅ. 29ರಂದು ಅಧಿಸೂಚನೆ ಹೊರಡಿಸಿ, ಪ್ರವರ್ಗ 1ರಲ್ಲಿ ಇದ್ದ ಪರಿವಾರ ಮತ್ತು ತಳವಾರ ಜಾತಿಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿದೆ’ ಎಂದೂ ನೋಟಿಸ್‌ನಲ್ಲಿದೆ.
‘ತಳವಾರ ಜಾತಿ ಕುರಿತು ಕೇಂದ್ರ ಸರ್ಕಾರ ಮತ್ತು ಎಸ್‌ಟಿ ಆಯೋಗವು ಸ್ಪಷ್ಟೀಕರಣ ಕೋರಿತ್ತು. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ನಿರ್ದೇಶಕರಿಗೆ 2014ರ ಏಪ್ರಿಲ್ 28ರಂದು ಬರೆದಿದ್ದ ರಾಜ್ಯ ಸರ್ಕಾರ, ‘ರಾಜ್ಯದಲ್ಲಿ ಒಂದೇ ಒಂದು ತಳವಾರ ಜಾತಿ ಇದೆ’ ಎಂದು ಸ್ಪಷ್ಟಪಡಿಸಿದೆ. ಆದರೆ, ಈಗ ಕೆಲವು ಅಧಿಕಾರಿಗಳು ಈ ಸ್ಪಷ್ಟನೆಗೆ ವಿರುದ್ಧವಾದ ನಿಲುವು ತೆಗೆದುಕೊಳ್ಳುತ್ತಿದೆ. ಯಾವುದೇ ಅಧ್ಯಯನ, ದಾಖಲೆಗಳಿಲ್ಲದೆ ಆಯೋಗವು ಹೊಸ ಜಾತಿಗಳನ್ನು ಸೃಷ್ಟಿಸಿದೆ. ಆ ಮೂಲಕ, ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸಲಾಗುತ್ತಿದೆ’ ಎಂದೂ ನೋಟಿಸ್‌ನಲ್ಲಿ ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.