ADVERTISEMENT

ರಾಸ: ರಸಶಾಸ್ತ್ರದ ಮಹಾಸಾಧಕ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 20:00 IST
Last Updated 17 ಜನವರಿ 2020, 20:00 IST
ಡಾ. ರಾ ಸತ್ಯನಾರಾಯಣ
ಡಾ. ರಾ ಸತ್ಯನಾರಾಯಣ   

ಮಹಾಮಹೋಪಾಧ್ಯಾಯ ಡಾ. ರಾ ಸತ್ಯನಾರಾಯಣರ ಕಾರ್ಯಕ್ಷೇತ್ರ ಬಹಳ ದೊಡ್ಡದು. ಸಂಗೀತಶಾಸ್ತ್ರ, ನೃತ್ಯ, ಶ್ರೀವಿದ್ಯೆ, ಕಲಾಮೀಮಾಂಸೆ - ಹೀಗೆ ಪಟ್ಟಿ ಬೆಳೆಯುತ್ತದೆ. ಹಾಗೆಂದು ಅವರ ವಿದ್ವತ್ತು ಆಯಾ ಕ್ಷೇತ್ರಗಳ ಸ್ಥೂಲವಾದ ಪರಿಚಯಕ್ಕಷ್ಟೇ ಸೀಮಿತವಲ್ಲ. ಶಾಸ್ತ್ರ ವಿಚಾರಗಳಲ್ಲಿ ಅವರು ಕಾಣಿಸುವ ಹೊಳಹುಗಳ ಆಳವು ಅನನ್ಯ. ಸುಮಾರು 20 ಸಾವಿರಪುಟಗಳನ್ನೂ ದಾಟುವಷ್ಟು ವಿಸ್ತಾರವಾದ ಪ್ರಕಟಿತ ಶಾಸ್ತ್ರವಾಙ್ಮಯ ಅವರದ್ದು. ಇವುಗಳನ್ನು ಅಮೂಲಾಗ್ರವಾಗಿ ನೋಡುವುದಿರಲಿ, ಮೇಲ್ನೋಟಕ್ಕೆ ಒಮ್ಮೆ ಗಮನಿಸಿದರೂ ಸಾಕು ಅವರ ಹಿರಿಮೆ ಎಂಥದ್ದು ಎಂಬ ಅರಿವಾದೀತು.

ಮತಂಗನ 'ಬೃಹದ್ದೇಶಿ'ಯನ್ನು ವಿಭಿನ್ನ ಆಕರಗಳಿಂದ ಪುನರ್‌ನಿರ್ಮಾಣ ಮಾಡಿದ ಅವರ ಸಾಹಸಕ್ಕೆ ಏನು ಹೇಳೋಣ. ಈ ಗ್ರಂಥಕ್ಕೆ ಬರೆದಿರುವ ವಿಸ್ತಾರವಾದ ಸಂಶೋಧನಾತ್ಮಕ ಮುನ್ನುಡಿಯೇ ಉತ್ಕೃಷ್ಟವಾದ ಗುಣಮಟ್ಟದ ಪುಸ್ತಕವಾದೀತು. ‘ಏಳೆ’ ಕುರಿತಾದ ಅವರ ಬೋಧಪ್ರದವಾದ ಗ್ರಂಥ ಎಲ್ಲ ಸಂಶೋಧಕರಿಗೂ ಮಾರ್ಗದರ್ಶಕ ಸ್ವರೂಪದ್ದು. ಸಾರಂಗದೇವನ ‘ಸಂಗೀತರತ್ನಾಕರ’ದ ಸ್ವರಗತ ಅಧ್ಯಾಯವೊಂದನ್ನೇ ಆಧರಿಸಿ ಗ್ರಂಥವನ್ನು ಗಮನಿಸಿದರೆ ಅವರ ಬರವಣಿಗೆಯ ಗಾಢತೆ ಅರಿವಾಗುತ್ತದೆ.

ಅವರ ಪೀಠಿಕೆಯ ವಿಸ್ತಾರ, ಓತಪ್ರೋತವಾಗಿ ಹರಿದುಬರುವ ಹೊಳಹುಗಳು, ತೀರಾ ತಾಂತ್ರಿಕ ಎನ್ನಿಸಬಹುದಾದ ಶ್ರುತಿ ಮೊದಲಾದವುಗಳ ಬಗ್ಗೆಯೇ ಅವರು ನಡೆಸುವ ವಿಸ್ತಾರವಾದ ವಿವೇಚನೆ, ಪ್ರಸ್ತಾರಗಳ ಕುರಿತಾದ ಅಧ್ಯಯನ, ಪರಿಭಾಷೆಯನ್ನು ಕಟ್ಟುವ ಮತ್ತು ಬೆಳಸುವ ಬಗೆ, ತೀಕ್ಷ್ಣವಾದ ವಿಮರ್ಶಕ ದೃಷ್ಟಿಕೋನ, ಶಾಸ್ತ್ರವಿಚಾರವನ್ನು ಕಟ್ಟುವ ಕೌಶಲ- ಇವೆಲ್ಲವೂ ಯಾವುದೇ ಪ್ರಾಮಾಣಿಕವಾದ ಶಾಸ್ತ್ರ ಕುತೂಹಲಿಗೆ ಕಾವ್ಯದ ಸುಖ ನೀಡಬಲ್ಲದು.

ADVERTISEMENT

ಅವರ ಯಾವ ಅನುವಾದ ಗ್ರಂಥವೂ ಕೇವಲ ‘ಅನುವಾದವಷ್ಟೇ’ ಆಗಿರುವುದು ಅಪರೂಪ. ಅವುಗಳೆ
ಲ್ಲವೂ ಸ್ವತಂತ್ರ ಗ್ರಂಥಗಳ ಸ್ವರೂಪವನ್ನೇ ಪಡೆದುಕೊಳ್ಳುತ್ತವೆ. ಅವರ ಗ್ರಂಥ
ಗಳು ತಮ್ಮ ವಿಷಯ, ಗಾತ್ರಗಳಲ್ಲಿ ಬೇರೆಯಾದರೂ - ಗುಣಮಟ್ಟದ ದೃಷ್ಟಿಯಿಂದ ಉತ್ಕೃಷ್ಟವಾಗಿರುವಂಥವು.

ಸಂಗೀತ ಶಾಸ್ತ್ರಜ್ಞರಾಗಿ ಡಾ. ರಾಸ ಅವರ ನಿರ್ಭೀಡೆ, ನಿಷ್ಠೆ, ಆಳವಾದ ಅಧ್ಯಯನ, ಹೊಳಹುಗಳು ಮತ್ತು ಕೆಲಸದ ಬಾಹುಳ್ಯ - ಇವುಗಳಿಗೆ ಹೋಲಿಸಿದರೆ, ಅವರಂತೆ ನಮ್ಮ ಸಂಗೀತ ಲಕ್ಷಣ ಕ್ಷೇತ್ರಕ್ಕೆ ದುಡಿದ ಮತ್ತೊಬ್ಬರು ಕಾಣಸಿಗರು. ಸಂಗೀತಶಾಸ್ತ್ರದ ಲಕ್ಷಣದ ಬೆಳವಣಿಗೆಯನ್ನು ನೋಡುವುದು ಹೇಗೆ, ಶಾಸ್ತ್ರಕಾರರ ಕೊಡುಗೆ ಮತ್ತು ಮಿತಿಗಳನ್ನು ಗುರುತಿಸುವ ಬಗೆ, ಸದಾ ಲಕ್ಷ್ಯದೊಡನೆ ಲಕ್ಷಣವನ್ನು, ಲಕ್ಷಣವನ್ನು ಲಕ್ಷ್ಯದೊಡನೆ ಸಮನ್ವಯ ಮಾಡುತ್ತಾ ನೋಡುವ ಕ್ರಮ - ಇವುಗಳನ್ನು ಸ್ವಲ್ಪವಾದರೂ ರೂಢಿಸಿಕೊಳ್ಳಬೇಕೆಂದರೆ ಅವರ ಗ್ರಂಥಗಳೇ ನಮಗೆ ದಿಕ್ಸೂಚಿ.

ಶಾಸ್ತ್ರವು ಮಾಡಬೇಕಾದ ಕೆಲಸವಾದರೂ ಏನು ಎಂಬುದರ ಮೂಲ ನಿಯಮಗಳನ್ನು ಸದಾ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದವರು ರಾಸ. ಶಾಸ್ತ್ರ ನಿಂತ ನೀರಾಗದೆ ಇರಬೇಕೆಂದರೆ ಅವುಗಳ ಮಿತಿಗಳನ್ನು ಗುರುತಿಸುವುದು ಎಷ್ಟು ಮುಖ್ಯ ಎನ್ನುವುದನ್ನು ಅವರಷ್ಟು ಚೆನ್ನಾಗಿ ಅರಿತುಕೊಂಡಿದ್ದವರು ಮತ್ತೊಬ್ಬರು ಇದ್ದಾರೋ ಇಲ್ಲವೋ ತಿಳಿಯದು.

ಶಾಸ್ತ್ರದಲ್ಲಿ ಆಗಬೇಕಾಗಿರುವ ಕೆಲಸವನ್ನೂ ಗುರುತಿಸುತ್ತಾರೆ. ಅಷ್ಟಕ್ಕೇ ನಿಲ್ಲದೆ, ಲಕ್ಷ್ಯಪರಂಪರೆಯಲ್ಲೇ ಅನೂಚಾನವಾಗಿ ಬಂದಿರುವ ಸರಳೆ, ಜಂಟಿ, ಅಲಂಕಾರ, ಗೀತೆ, ವರ್ಣ ಮೊದಲಾದವುಗಳನ್ನು
ಈ ಲಾಕ್ಷಣಿಕ ಪರಂಪರೆಯೊಳಗೆ ಹೇಗೆ ನೋಡಬಹುದು ಎಂಬುದರ ವಿಸ್ತಾರವ ವಿವೇಚನೆಯನ್ನೂ ಮಾಡುತ್ತಾರೆ. ಇಡೀ ಪರಂಪರೆಯಲ್ಲಿನ ಎಲ್ಲ ಲಾಕ್ಷಣಿಕರನ್ನೂ ಇದೇ ಬಗೆಯ ವಸ್ತುನಿಷ್ಟ ದೃಷ್ಟಿಯಲ್ಲಿ ನೋಡುವ ಮನೋಪರಿಪಾಕ ಅವರದ್ದು. ಪ್ರಮಾಣಪೂರ್ಣವಾಗಿ ತಮಗೆ ಸತ್ಯವೆನ್ನಿಸಿದ್ದನ್ನು ಹೇಳಲು ಎಂದೂ ಹಿಂಜರಿದವರಲ್ಲ. ಅದು ವಿದ್ಯಾರಣ್ಯರ 'ಸಂಗೀತ ಸಾರ' ಕೃತಿಯ ಕುರಿತಾದ ವಿಷಯವಾಗಲೀ, 'ತರಂಗಿಣಿ ರಾಗದ' ಕುರಿತದ್ದಾಗಲೀ, ರಸಮೀಮಾಂಸೆಯ ಕುರಿತಾದ ವಿವೇಚನೆಯಾಗಲೀ, ಭಾತಖಂಡೆ ಅವರು ಶ್ರುತಿಗಳ ಕುರಿತಾಗಿ ದಕ್ಷಿಣದ ಸಂಗೀತ ವಿದ್ವಾಂಸರ ಬಗ್ಗೆ ಕೊಟ್ಟ ತಪ್ಪು ಮಾಹಿತಿಯೇ ಆಗಲಿ, ನಿರ್ಭೀಡೆಯಿಂದ ಹೇಳುವವರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.